ಹೊಸದಿಗಂತ ಬೆಳಗಾವಿ:
ಅಪ್ರಾಪ್ತ ಬಾಲಕಿಯ ಮೇಲೆ ಅಮಾನವೀಯವಾಗಿ ಅತ್ಯಾಚಾರ ಎಸಗಿದ್ದ ಆರೋಪಿಗೆ ಬೆಳಗಾವಿಯ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 37 ವರ್ಷಗಳ ಸುದೀರ್ಘ ಜೈಲು ಶಿಕ್ಷೆ ಹಾಗೂ 1.25 ಲಕ್ಷ ರೂಪಾಯಿ ದಂಡ ವಿಧಿಸಿ ಮಹತ್ವದ ಆದೇಶ ಹೊರಡಿಸಿದೆ.
2025ರಲ್ಲಿ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಆರೋಪಿ ರುತೇಶ ಅನಿಲ್ ಭೋಸಲೆ (22), ಬಾಲಕಿಗೆ ಲಡ್ಡು ಕೊಡುವುದಾಗಿ ಆಮಿಷ ಒಡ್ಡಿ ತನ್ನ ಮನೆಗೆ ಕರೆದೊಯ್ದು ಈ ಕೃತ್ಯ ಎಸಗಿದ್ದನು. ಅಲ್ಲದೆ, ಈ ವಿಷಯವನ್ನು ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದನು. ಇದಾದ ಬಳಿಕ ಬಾಲಕಿಯ ಶಾಲಾ ರಜೆಯ ಸಮಯವನ್ನು ಬಳಸಿಕೊಂಡು ಪುನಃ ಆಕೆಯ ಮೇಲೆ ದೌರ್ಜನ್ಯ ಎಸಗಿದ್ದನು.
ಪ್ರಕರಣದ ಗಂಭೀರತೆಯನ್ನು ಪರಿಗಣಿಸಿದ ಎಫ್.ಟಿ.ಎನ್.ಸಿ-01 ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಅವರು, ಆರೋಪಿಗೆ 37 ವರ್ಷಗಳ ಕಾಲ ಕಾರಾಗೃಹ ವಾಸದ ಶಿಕ್ಷೆ ವಿಧಿಸಿದ್ದಾರೆ. ಸರ್ಕಾರದ ಪರವಾಗಿ ಪಬ್ಲಿಕ್ ಪ್ರಾಸಿಕ್ಯೂಟರ್ ಎಲ್.ವಿ. ಪಾಟೀಲ ಅವರು ಪ್ರಬಲವಾಗಿ ವಾದ ಮಂಡಿಸಿದ್ದರು.
ಕಾಕತಿ ಠಾಣೆಯ ಪಿ.ಐ ಸುರೇಶ ಪಿ. ಶಿಂಗಿ ನೇತೃತ್ವದ ತಂಡವು ಅತ್ಯಂತ ವ್ಯವಸ್ಥಿತವಾಗಿ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿತ್ತು. ತನಿಖೆಯಲ್ಲಿ ಮಹತ್ವದ ಪಾತ್ರ ವಹಿಸಿದ ಪಿ.ಎಸ್.ಐಗಳಾದ ಮಂಜುನಾಥ ಹುಲಕುಂದ, ಮೃತ್ಯುಂಜಯ ಮಠದ ಹಾಗೂ ಸಿಬ್ಬಂದಿಯ ಕಾರ್ಯವನ್ನು ಬೆಳಗಾವಿ ನಗರ ಪೊಲೀಸ್ ಆಯುಕ್ತರು ಮತ್ತು ಡಿಸಿಪಿ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಈ ತೀರ್ಪು ಅಪ್ರಾಪ್ತರ ಮೇಲೆ ಕಣ್ಣು ಹಾಕುವ ಕಾಮುಕರಿಗೆ ಎಚ್ಚರಿಕೆಯ ಗಂಟೆಯಾಗಿದ್ದು, ಸಂತ್ರಸ್ತ ಕುಟುಂಬಕ್ಕೆ ನ್ಯಾಯ ಸಿಕ್ಕಂತಾಗಿದೆ.



