ಹೊಸದಿಗಂತ ಡಿಜಿಟಲ್ ಡೆಸ್ಕ್:
ಮನೆಯ ಮುಂದೆ ಆಟವಾಡುತ್ತಿದ್ದ ನಾಲ್ಕು ವರ್ಷದ ಮಗು ಅಚಾನಕ್ ಆಗಿ ನೀರಿನ ಸಂಪ್ ಒಳಗೆ ಬಿದ್ದು ಪ್ರಾಣ ಕಳೆದುಕೊಂಡ ಘಟನೆ ಹಾಸನ ತಾಲ್ಲೂಕಿನ ಅಣಚಿಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಬಾಲಕನನ್ನು ಎಡನ್ ಸ್ವೀವ್ (4) ಎಂದು ಗುರುತಿಸಲಾಗಿದೆ.
ಎಂದಿನಂತೆ ಮನೆಯ ಮುಂಭಾಗದಲ್ಲಿ ಸೈಕಲ್‌ನಲ್ಲಿ ಆಟವಾಡುತ್ತಿದ್ದ ಎಡನ್, ಯಾರಿಗೂ ಗಮನಕ್ಕೆ ಬಾರದಂತೆ ಸಮೀಪದಲ್ಲಿದ್ದ ನೀರಿನ ಸಂಪ್ ಬಳಿ ತೆರಳಿದ್ದಾನೆ ಎನ್ನಲಾಗಿದೆ. ಆ ಸಮಯದಲ್ಲಿ ಪೋಷಕರು ಮನೆಯೊಳಗೇ ಇದ್ದರು. ಸ್ವಲ್ಪ ಸಮಯದ ಬಳಿಕ ಮಗುವಿನ ಶಬ್ದ ಕೇಳಿಸದ ಕಾರಣ ಆತಂಕಗೊಂಡು ಹೊರಬಂದ ಪೋಷಕರು ಸುತ್ತಮುತ್ತ ಹುಡುಕಾಟ ನಡೆಸಿದ್ದಾರೆ.
ಈ ವೇಳೆ ನೀರಿನ ಸಂಪ್ ಬಳಿ ಬಾಲಕನ ಸೈಕಲ್ ಬಿದ್ದಿರುವುದು ಕಂಡುಬಂದಿದೆ. ಅನುಮಾನಗೊಂಡು ಸಂಪ್ ಪರಿಶೀಲಿಸಿದಾಗ, ಮಗುವಿನ ದೇಹ ನೀರಿನಲ್ಲಿ ತೇಲುತ್ತಿರುವುದು ಗೋಚರಿಸಿದೆ. ತಕ್ಷಣವೇ ಮಗುವನ್ನು ಹಾಸನದ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಅಷ್ಟರಲ್ಲಿ ಮಗು ಮೃತಪಟ್ಟಿತ್ತು.
ಘಟನೆಯ ಮಾಹಿತಿ ತಿಳಿದ ಕೂಡಲೇ ಹಾಸನ ನಗರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

