ಹೊಸದಿಗಂತ ಹಾಸನ:
“ಒಂದು ಲಕ್ಷ ರೂಪಾಯಿ ಸಾಲಕ್ಕೆ ಬರೋಬ್ಬರಿ 40 ಲಕ್ಷ ರೂಪಾಯಿಯ ಕೇಸ್… ಈ ಕಿರುಕುಳವನ್ನು ನಾನು ಇನ್ಯಾವ ಕಾಲಕ್ಕೆ ತಾಳಿಕೊಳ್ಳಲಿ?” – ಇದು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಕೃಷ್ಣಪ್ಪ ಎಂಬುವವರು ಸೆಲ್ಫಿ ವಿಡಿಯೋದಲ್ಲಿ ಹರಿಸಿರುವ ಕಣ್ಣೀರಿನ ಪ್ರಶ್ನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಮೂಲದ ಕೃಷ್ಣಪ್ಪ (47), ಕಳೆದ ಕೆಲವು ವರ್ಷಗಳಿಂದ ಹಾಸನದಲ್ಲಿ ವಾಸವಿದ್ದರು. ಸಾಲಗಾರರ ನಿರಂತರ ಮಾನಸಿಕ ಕಿರುಕುಳದಿಂದ ನೊಂದಿದ್ದ ಇವರು, ಹಾಸನದ ಹೊರವಲಯದ ದೊಡ್ಡಪುರ ಬಳಿ ಸೆಲ್ಫಿ ವಿಡಿಯೋ ಚಿತ್ರೀಕರಿಸಿ ವಿಷ ಸೇವಿಸಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ.

ಕೃಷ್ಣಪ್ಪ ಅವರು ಸಾವಿಗೂ ಮುನ್ನ ರೆಕಾರ್ಡ್ ಮಾಡಿದ ವಿಡಿಯೋದಲ್ಲಿ ನೆಲಮಂಗಲದ ರಮೇಶ್ ಮತ್ತು ಮಂಜು ಎಂಬುವವರ ಹೆಸರನ್ನು ಉಲ್ಲೇಖಿಸಿದ್ದಾರೆ. “ನಾನು ಪಡೆದದ್ದು ಕೇವಲ 1 ಲಕ್ಷ ರೂ. ಸಾಲ. ಆದರೆ ಅವರು ನನ್ನ ಮೇಲೆ 40 ಲಕ್ಷ ರೂ. ಮೊತ್ತದ ಚೆಕ್ ಕೇಸ್ ದಾಖಲಿಸಿ ಹಣಕ್ಕಾಗಿ ಪೀಡಿಸುತ್ತಿದ್ದಾರೆ. ಜಾಮೀನು ಪಡೆಯಲು ಹಣವಿಲ್ಲದೆ ನಾನು ಮಾನಸಿಕವಾಗಿ ಕುಸಿದಿದ್ದೇನೆ” ಎಂದು ಹೇಳಿಕೊಂಡಿದ್ದಾರೆ.
ಅಲ್ಲದೆ, ಪತ್ನಿ ಕಾಂಚನ ಅವರ ಬಳಿ ಕ್ಷಮೆಯಾಚಿಸುತ್ತಾ, “ಕಾಂಚನ, ನನ್ನನ್ನು ಕ್ಷಮಿಸಿಬಿಡು, ನಾನು ಸೋತುಹೋದೆ” ಎಂದು ಹೇಳಿರುವುದು ಪ್ರತಿಯೊಬ್ಬರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದೆ. ತಮ್ಮ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಅವರು ವಿಡಿಯೋದಲ್ಲಿ ಮನವಿ ಮಾಡಿದ್ದಾರೆ.
ಈ ಸಂಬಂಧ ಹಾಸನ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೃಷ್ಣಪ್ಪ ಅವರ ಸೆಲ್ಫಿ ವಿಡಿಯೋ ಮತ್ತು ಕುಟುಂಬದ ಹೇಳಿಕೆಗಳನ್ನು ಆಧಾರವಾಗಿಟ್ಟುಕೊಂಡು ಪೊಲೀಸರು ತನಿಖೆ ಆರಂಭಿಸಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.



