ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದ ಕತ್ರಾದಲ್ಲಿರುವ ಶ್ರೀ ಮಾತಾ ವೈಷ್ಣೋ ದೇವಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಕ್ಸಲೆನ್ಸ್ ವೈದ್ಯಕೀಯ ಕಾಲೇಜಿನ 2025-26ರ ಶೈಕ್ಷಣಿಕ ವರ್ಷದ 50 ವಿದ್ಯಾರ್ಥಿಗಳ ಮೊದಲ ಎಂಬಿಬಿಎಸ್ ಬ್ಯಾಚ್‌ನಲ್ಲಿ 42 ಮುಸ್ಲಿಂ ವಿದ್ಯಾರ್ಥಿಗಳಿಗೆ ಪ್ರವೇಶ ದೊರೆತಿದ್ದು, ಇದೀಗ ವಿವಾದಕ್ಕೆ ಕಾರಣವಾಗಿದೆ.
ಬಲ ಪಂಥೀಯ ಸಂಘಟನೆಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಕೈಗೊಂಡಿದ್ದು, ಬಿಜೆಪಿ ಕೂಡ ಪ್ರವೇಶ ಪಡೆದ ಮುಸ್ಲಿಂ ವಿದ್ಯಾರ್ಥಿಗಳ ಸೀಟನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದೆ.
ವೈದ್ಯಕೀಯ ಕಾಲೇಜಿನ ಮೊದಲ ಬ್ಯಾಚ್‌ನ ಬಹುಪಾಲು ಮುಸ್ಲಿಂ ವಿದ್ಯಾರ್ಥಿಗಳ ಪ್ರವೇಶವನ್ನು ರದ್ದುಗೊಳಿಸುವಂತೆ ಕೋರಿ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರಿಗೆ ಮನವಿ ಸಲ್ಲಿಸಿದೆ.
ನೀಟ್ ನಿಯಮದ ಪ್ರಕಾರವೇ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಾಗಿದೆ ಎಂದು ಕಾಲೇಜ್ ಆಡಳಿತ ಮಂಡಳಿ ಕ್ರಮವನ್ನು ಸಮರ್ಥಿಸಿಕೊಂಡಿದೆ. ಅದಾಗ್ಯೂ ಬಲ ಪಂಥೀಯ ಸಂಂಘಟನೆಗಳು ಕಾಲೇಜಿನಲ್ಲಿ ಹಿಂದು ವಿದ್ಯಾರ್ಥಿಗಳಿಗೆ ಆದ್ಯತೆ ನೀಡಬೇಕೆಂದು ಆಗ್ರಹಿಸಿವೆ.
ಬಿಜೆಪಿ ಹೇಳಿದ್ದೇನು?
ಬಿಜೆಪಿ ಶಾಸಕ ಆರ್.ಎಸ್. ಪಠಾನಿಯಾ ಎಕ್ಸ್‌ನಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ʼʼವೈಷ್ಣೋ ದೇವಿ ಭಕ್ತರ ಕೊಡುಗೆಗಳ ಮೂಲಕ ರಚಿಸಲಾದ ಇಂತಹ ಸಂಸ್ಥೆಗಳು ದೇವಾಲಯದ ಆಧ್ಯಾತ್ಮಿಕ ಸ್ವರೂಪವನ್ನು ಪ್ರತಿಬಿಂಬಿಸಬೇಕು. ಇದಕ್ಕಾಗಿ ದೇವಾಲಯ ಮಂಡಳಿ ಕಾಯ್ದೆ ಮತ್ತು ವಿಶ್ವವಿದ್ಯಾಲಯ ಕಾಯ್ದೆಗೆ ತಿದ್ದುಪಡಿ ತರಬೇಕುʼʼ ಎಂದು ಪಟ್ಟು ಹಿಡಿದರು.
ಒಂದು ನಿರ್ದಿಷ್ಟ ಸಮುದಾಯದ ವಿದ್ಯಾರ್ಥಿಗಳು ಕಾಲೇಜಿಗೆ ಪ್ರವೇಶ ಪಡೆಯಬೇಕು ಎಂಬ ವಿಚಾರ ದೇಶದ ಜನರಿಗೆ ಸ್ವೀಕಾರಾರ್ಹವಲ್ಲ. ನಮ್ಮ ಭಾವನೆಗಳನ್ನು ಮತ್ತು ಜನರ ನೋವನ್ನು ನಾವು ಲೆಫ್ಟಿನೆಂಟ್ ಗವರ್ನರ್ ಅವರಿಗೆ ತಿಳಿಸಿದ್ದೇವೆ. ಮಾತಾ ವೈಷ್ಣೋದೇವಿಯಲ್ಲಿ ನಂಬಿಕೆ ಇಟ್ಟಿರುವ ವಿದ್ಯಾರ್ಥಿಗಳಿಗೆ ಮಾತ್ರ ವೈದ್ಯಕೀಯ ಕಾಲೇಜಿಗೆ ಪ್ರವೇಶ ನೀಡಬೇಕು ಎಂಬುದು ಬಿಜೆಪಿಯ ನಿಲುವು ಎಂದು ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುನಿಲ್ ಶರ್ಮಾ ಹೇಳಿದರು.
ನಿರ್ದಿಷ್ಟ ಸಮುದಾಯದ ವಿದ್ಯಾರ್ಥಿಗಳ ಪ್ರವೇಶವನ್ನು ರದ್ದುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮನೋಜ್ ಸಿನ್ಹಾ ಭರವಸೆ ನೀಡಿದ್ದಾರೆ ಎಂದು ಶರ್ಮಾ ತಿಳಿಸಿದರು. ಅಧಿಕೃತ ಮೂಲಗಳ ಪ್ರಕಾರ, ವೈಷ್ಣೋ ದೇವಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಕ್ಸಲೆನ್ಸ್ ಅನ್ನು ಅಲ್ಪಸಂಖ್ಯಾತ ಸಂಸ್ಥೆ ಎಂದು ವರ್ಗೀಕರಿಸಲಾಗಿಲ್ಲ. ಆದ್ದರಿಂದ ಪ್ರವೇಶ ಪ್ರಕ್ರಿಯೆಯನ್ನು ಮಾರ್ಗಸೂಚಿಗಳ ಪ್ರಕಾರ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 13 ವೈದ್ಯಕೀಯ ಕಾಲೇಜುಗಳಿವೆ. ವೈಷ್ಣೋ ದೇವಿ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಎಕ್ಸಲೆನ್ಸ್ ಅನ್ನು ಈ ವರ್ಷ ಆರಂಭಿಸಲಾಗಿದೆ. ಪ್ರವೇಶಗಳನ್ನು ನೀಟ್‌ನ ಮೆರಿಟ್ ಪಟ್ಟಿಯನ್ನು ಆಧರಿಸಿ ನೀಡಲಾಗುತ್ತದೆ ಎಂದು ಅಧಿಕೃತರು ತಿಳಿಸಿದ್ದಾರೆ. ಜಮ್ಮುವಿನಿಂದ ಕೇವಲ 8 ಹಿಂದು ವಿದ್ಯಾರ್ಥಿಗಳು 50 ಸೀಟ್‌ನ ಬ್ಯಾಚ್‌ನಲ್ಲಿ ಪ್ರವೇಶ ಪಡೆದಿದ್ದಾರೆ.

