January17, 2026
Saturday, January 17, 2026
spot_img

ಆಕ್ಸಿಡೆಂಟ್‌ನಿಂದ ಪವಾಡಸದೃಶವಾಗಿ ಪಾರಾದ 42 ಶಾಲಾ ಮಕ್ಕಳು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಮಧ್ಯರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಲಾರಿ ಡಿಕ್ಕಿಯಾಗಿ ಖಾಸಗಿ ಸ್ಲೀಪರ್ ಕೋಚ್ ಬಸ್​ಗೆ ಬೆಂಕಿ ಹೊತ್ತಿಕೊಂಡು ಉರಿದ ಪರಿಣಾಮ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಬೆಂಗಳೂರಿನಿಂದ ಗೋಕರ್ಣಕ್ಕೆ ಹೊರಟಿದ್ದ ಈ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಹಲವರು ಗಾಯಗೊಂಡಿದ್ದಾರೆ.

ಈ ದುರಂತದಲ್ಲಿ ಸುಮಾರು 29 ಪ್ರಯಾಣಿಕರ ಪೈಕಿ 9 ಮಂದಿ ಮೃತಪಟ್ಟಿರುವುದಾಗಿ ಪ್ರಾಥಮಿಕ ವರದಿಯು ತಿಳಿಸಿದೆ. ಅಪಘಾತದ ಸಂದರ್ಭದಲ್ಲಿ, ಬೆಂಕಿಯಿಂದ ಹೊತ್ತಿ ಉರಿಯುತ್ತಿದ್ದ ಬಸ್‌ನ ಹಿಂದೆ ಇದ್ದ ದಾಂಡೇಲಿಗೆ ತೆರಳುತ್ತಿದ್ದ 42 ಶಾಲಾ ಮಕ್ಕಳಿದ್ದ ಮತ್ತೊಂದು ಬಸ್ಸಿಗೂ ಕೂಡ ಬೆಂಕಿ ಹತ್ತಿದೆ. ಇದರ ಪರಿಣಾಮ ಶಾಲಾ ಬಸ್ಸು ರಾಷ್ಟ್ರೀಯ ಹೆದ್ದಾರಿಯ ಬೇಲಿಯನ್ನು ಕಿತ್ತು ಚರಂಡಿ ದಾಟಿ ಆ ಕಡೆಗೆ ಹೋಗಿ ನಿಂತಿದೆ.

ಅದೃಷ್ಟವಶಾತ್, ಬಸ್ಸಿನಲ್ಲಿದ್ದ 42 ಮಕ್ಕಳಲ್ಲಿ ಒಬ್ಬರಿಗೂ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ. ಮಕ್ಕಳಿದ್ದ ಬಸ್ಸಿನ ಚಾಲಕ ಘಟನೆಗೆ ಪ್ರತ್ಯಕ್ಷ ಸಾಕ್ಷಿಯಾಗಿದ್ದು, ಅವರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಪ್ರಸ್ತುತ, ಅಪಘಾತದ ತನಿಖೆ ನಡೆಯುತ್ತಿದ್ದು, ಮೃತದೇಹಗಳನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಮೃತಪಟ್ಟ ಪ್ರಯಾಣಿಕರು ಡಿಜಿಟಲ್ ಮೂಲಕ ಟಿಕೆಟ್ ಕಾಯ್ದಿರಿಸಿದ್ದರಿಂದ, ಅವರ ದೂರವಾಣಿ ಸಂಖ್ಯೆಗಳನ್ನು ಬಳಸಿ ಸಂಬಂಧಿಕರನ್ನು ಸಂಪರ್ಕಿಸುವ ಪ್ರಯತ್ನದಲ್ಲಿ ಪೊಲೀಸ್ ಅಧಿಕಾರಿಗಳು ನಿರತರಾಗಿದ್ದಾರೆ. ಅಪಘಾತಕ್ಕೆ ಕಾರಣವೇನು ಮತ್ತು ಅದು ಹೇಗೆ ಸಂಭವಿಸಿತು ಎಂಬುದರ ಕುರಿತು ತನಿಖೆ ನಡೆಯುತ್ತಿದೆ.

Must Read

error: Content is protected !!