Thursday, December 4, 2025

ಶಿವಗಿರಿ ಶಾಖಾ ಮಠ ಸ್ಥಾಪನೆಗೆ 5 ಎಕರೆ ಜಮೀನು: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಕರಾವಳಿಯಲ್ಲಿ ಕೇರಳದ ಶಿವಗಿರಿಯ ಶಾಖಾ ಮಠವನ್ನು ಸ್ಥಾಪಿಸಲು ಐದು ಎಕರೆ ಜಮೀನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ವರ್ಕಲ ಶಿವಗಿರಿ ಮಠ ಮತ್ತು ಬ್ರಹ್ಮಶ್ರೀ ನಾರಾಯಣ ಗುರು ಅಧ್ಯಯನ ಪೀಠ, ಮಂಗಳೂರು ವಿಶ್ವವಿದ್ಯಾನಿಲಯದ ಆಶ್ರಯದಲ್ಲಿ ಮಂಗಳಗಂಗೋತ್ರಿಯ ಮಂಗಳೂರು ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಮತ್ತು ಮಹಾತ್ಮ ಗಾಂಧಿ ಐತಿಹಾಸಿಕ ಸಂವಾದ ಶತಮಾನೋತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಶಿವಗಿರಿ ಮಠದ ಸ್ವಾಮೀಜಿಗಳ ಅಪೇಕ್ಷೆಯಂತೆ ಉಡುಪಿ ಅಥವಾ ಮಂಗಳೂರಿನಲ್ಲಿ ಶಿವಗಿರಿ ಶಾಖಾ ಮಠ ಸ್ಥಾಪಿಸಲು ಜಮೀನು ಒದಗಿಸಲಾಗುವುದು. ಸೂಕ್ತ ಸ್ಥಳವನ್ನು ಗುರುತಿಸುವ ಕೆಲಸ ನಡೆಯಲಿ. ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಮತ್ತಿತರ ನಾಯಕರು ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸುವಂತೆ ಸೂಚಿಸಿದರು.

ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂಬ ಸಂದೇಶ ಸಾರುತ್ತಾ, ಸಮಾಜದ ಜಾತಿ ವ್ಯವಸ್ಥೆ, ಮೇಲು ಕೀಳು ಎಂಬ ಅಸಮಾನತೆಯ ವಿರುದ್ಧ ಧ್ವನಿ ಎತ್ತಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು. ಅವರನ್ನು ಸಮಾಜ ಎಂದೂ ಮರೆಯಲು ಸಾಧ್ಯವಿಲ್ಲ. ಗಾಂಧಿ ಮತ್ತು ನಾರಾಯಣ ಗುರುಗಳ ಭೇಟಿ ಮತ್ತು ಸಂವಾದದ ಹಿನ್ನೆಲೆಯಲ್ಲಿ ಶತಮಾನೋತ್ಸವ ಕಾರ್ಯಕ್ರಮವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದವರು ಹೇಳಿದರು.

ನಾರಾಯಣ ಗುರುಗಳೊಂದಿಗಿನ ಐತಿಹಾಸಿಕ ಭೇಟಿಯು ಗಾಂಧಿಜಿಯವರಿಗೆ ದೇಶದ ಸ್ವಾತಂತ್ರ್ಯದ ಕುರಿತಾಗಿ ಸ್ಪಷ್ಟವಾದ ಕಲ್ಪನೆಯು ಮೂಡಲು ಕಾರಣವಾಯಿತು ಎನ್ನಬಹುದು. ಜಾತಿ ವ್ಯವಸ್ಥೆಯು ಕೇವಲ ಒಂದು ಸಾಮಾಜಿಕ ಕಟ್ಟುಪಾಡು, ಅದು ಮಾನವ ಧರ್ಮವಲ್ಲ ಎಂಬುದನ್ನು ಗಾಂಽಜಿಯವರಿಗೆ ನಾರಾಯಣ ಗುರುಗಳು ಮತ್ತಷ್ಟು ಮನದಟ್ಟು ಮಾಡಿಸಿದರು. ಗುರುಗಳ ಭೇಟಿಯ ಬಳಿಕ ಗಾಂಽಜಿಯವರು ಅಸ್ಪೃಷ್ಯತಾ ನಿವಾರಣೆಗೆ ಮತ್ತಷ್ಟು ಬಲವಾದ ಬದ್ಧತೆಯನ್ನು ಬೆಳೆಸಿಕೊಂಡರು ಎಂದು ಸಿಎಂ ಹೇಳಿದರು.

ಶಿವಗಿರಿ ಮಠದ ಪೀಠಾಪತಿ ಸಚ್ಚಿದಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಲೋಕಸಭೆಯ ಸಾರ್ವಜನಿಕ ಲೆಕ್ಕ ಪತ್ರ ಸಮಿತಿ ಅಧ್ಯಕ್ಷ ಕೆ.ಸಿ. ವೇಣುಗೋಪಾಲ್ ‘ಶ್ರೀ ನಾರಾಯಣ ಗುರು ಮತ್ತು ಗಾಂಧಿ ಸಮಾಗಮ’ ಬಗ್ಗೆ ಪ್ರಧಾನ ಸಂದೇಶ ನೀಡಿದರು.

ಗೃಹ ಸಚಿವ ಡಾ.ಜಿ ಪರಮೇಶ್ವರ್, ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್, ಶಿವಗಿರಿ ಮಠದ ಕಾರ್ಯದರ್ಶಿ ಶುಭಾಂಗಾನಂದ ಸ್ವಾಮೀಜಿ, ದ.ಕ. ಜಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಲೋಕೋಪಯೋಗಿ ಸಚಿವ ಸತೀಶ್ ಜರಕಿಹೊಳಿ, ವಸತಿ ಮತ್ತು ವಕ್ ಸಚಿವ ಜಮೀರ್ ಅಹ್ಮದ್, ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ,ಸಂವಾದ ಶತಮಾನೋತ್ಸವ ಕಾರ್ಯಕ್ರಮದ ಅಧ್ಯಕ್ಷ ಬಿ ಕೆ ಹರಿಪ್ರಸಾದ್, ಪ್ರಧಾನ ಸಂಚಾಲಕ ಪಿ.ವಿ. ಮೋಹನ್, ಸಂಚಾಲಕರಾದ ರಕ್ಷಿತ್ ಶಿವರಾಂ, ಕೆ. ಗೋಪಿ ಇನ್ನಿತರರು ಉಪಸ್ಥಿತರಿದ್ದರು.

error: Content is protected !!