February 17, 2026
Tuesday, February 17, 2026
spot_img

ಮುಂದಿನ 20 ವರ್ಷಗಳಲ್ಲಿ 500 ಲಘು ಹೆಲಿಕಾಪ್ಟರ್ ಸಿದ್ಧ: ಸಚಿವ ಎಂ ಬಿ ಪಾಟೀಲ್‌

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮುಂದಿನ 20 ವರ್ಷಗಳಲ್ಲಿ ಎಚ್125 ದರ್ಜೆಯ 500 ಲಘು ಹೆಲಿಕಾಪ್ಟರ್ ಸಿದ್ಧವಾಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಎಂ ಬಿ ಪಾಟೀಲ್‌ ಹೇಳಿದ್ದಾರೆ.

ಕೋಲಾರದ ವೇಮಗಲ್ ನಲ್ಲಿ ಫ್ರಾನ್ಸ್ ಮೂಲದ ಏರ್‌ಬಸ್ ಮತ್ತು ಭಾರತದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್ (TASL) ಜತೆಗೂಡಿ ಅಭಿವೃದ್ಧಿಪಡಿಸಿರುವ ದೇಶದ ಪ್ರಪ್ರಥಮ, ಖಾಸಗಿ ವಲಯದ ಹೆಲಿಕಾಪ್ಟರ್ ಜೋಡಣಾ ಘಟಕವನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯಯೆಲ್‌ ಮ್ಯಾಕ್ರನ್‌ ಅವರು ಮಹಾರಾಷ್ಟ್ರದ ಲೋಕಭವನದಿಂದ ವರ್ಚುಯಲ್ ಮೂಲಕಉದ್ಘಾಟಿಸಿದರು.

ಈ ಸಂದರ್ಭ ಮಾತನಾಡಿದ ಎಂಬಿ ಪಾಟೀಲ್‌, ಈ ಘಟಕಕ್ಕೆ ನಾನು ಕೈಗಾರಿಕಾ ಸಚಿವನಾದ ಮೇಲೆ 17 ಎಕರೆ ಜಾಗ ಕೊಟ್ಟಿದ್ದು ದಾಖಲೆ ಅವಧಿ ಅಂದರೆ ಒಂದೂವರೆ ವರ್ಷದಲ್ಲಿ ಉದ್ಘಾಟನೆ ಆಗುತ್ತಿರುವುದು ಸಂತಸದ ವಿಷಯ ಎಂದು ಹರ್ಷ ವ್ಯಕ್ತಪಡಿಸಿದರು.

ಫ್ರಾನ್ಸ್, ಅಮೆರಿಕ, ಬ್ರೆಜಿಲ್ ನಂತರ ನಮ್ಮಲ್ಲಿ ಜಗತ್ತಿನ ನಾಲ್ಕನೆಯ ಎಚ್125 ಹೆಲಿಕಾಪ್ಟರ್ ತಯಾರಿಕೆ ಮತ್ತು ಅಂತಿಮ ಜೋಡಣೆ ಘಟಕ (ಎಫ್ಎಎಲ್- ಫೈನಲ್ ಅಸೆಂಬ್ಲಿ ಲೈನ್) ಬಂದಿರುವುದು ಈ ವಲಯಕ್ಕೆ ಮತ್ತಷ್ಟು ಬಲ ತರಲಿದೆ. ಜೊತೆಗೆ ನಿರ್ವಹಣೆ, ದುರಸ್ತಿ ಮತ್ತು ಓವರಹಾಲ್ (ಎಂಆರ್ಒ- ಮೇಂಟೆನೆನ್ಸ್, ರಿಪೇರ್ & ಓವರ್ಹಾಲ್) ಸ್ಥಾವರವೂ ಆರಂಭಗೊಂಡಿರುವುದು ರಾಜ್ಯದ ಕೈಗಾರಿಕಾಸ್ನೇಹಿ ವಾತಾವರಣಕ್ಕೆ ಸಾಕ್ಷಿಯಾಗಿದೆ ಎಂದಿದ್ದಾರೆ.

ಮುಂದಿನ ಎರಡು ದಶಕಗಳಲ್ಲಿ 500 ಲಘು ಹೆಲಿಕಾಪ್ಟರ್ ಸಿದ್ಧವಾಗಲಿವೆ. ಇಲ್ಲಿ ಏವಿಯಾನಿಕ್ಸ್, ಹೈಡ್ರಾಲಿಕ್ ಸರ್ಕ್ಯೂಟ್, ಬಿಡಿಭಾಗಗಳು, ಇಂಧನ ವ್ಯವಸ್ಥೆ ಮತ್ತು ಎಂಜಿನ್ನುಗಳ ತಯಾರಿಕೆ ಸೇರಿದಂತೆ ಹಲವು ಮಹತ್ವದ ಚಟುವಟಿಕೆಗಳು ನಡೆಯಲಿವೆ. ಆಂಧ್ರಪ್ರದೇಶ, ಉತ್ತರಪ್ರದೇಶ ಮತ್ತು ಗುಜರಾತ್ ರಾಜ್ಯಗಳ ತೀವ್ರ ಸ್ಪರ್ಧೆಯನ್ನು ಎದುರಿಸಿ, ರಾಜ್ಯವು ಈ ಯೋಜನೆಯನ್ನು ಗೆದ್ದುಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಅವರು ಬಣ್ಣಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !