Thursday, November 20, 2025

60 ರಾಷ್ಟ್ರಗಳ ಸಂವಾದ, ತ್ರಿವಳಿ ಸ್ಟಾರ್‌ಗಳ ಸ್ಪೂರ್ತಿ: ಬೆಂಗಳೂರು ಟೆಕ್ ಶೃಂಗಸಭೆಗೆ ಅದ್ದೂರಿ ತೆರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕಳೆದ ಮೂರು ದಿನಗಳಿಂದ ಬೆಂಗಳೂರಿನ ಹೊರವಲಯ, ನೆಲಮಂಗಲ ಸಮೀಪದ ಮಾದವಾರ ಬಿಐಇಸಿ ಆವರಣದಲ್ಲಿ ನಡೆಯುತ್ತಿದ್ದ ಪ್ರತಿಷ್ಠಿತ ಬೆಂಗಳೂರು ತಂತ್ರಜ್ಞಾನ ಶೃಂಗಸಭೆ 2025ರ 28ನೇ ಆವೃತ್ತಿಗೆ ಇಂದು ಅದ್ಧೂರಿಯಾಗಿ ತೆರೆ ಬಿದ್ದಿದೆ.

ಈ ಬಾರಿಯ ಶೃಂಗಸಭೆಯು ವಿಶೇಷವಾಗಿ 60ಕ್ಕೂ ಹೆಚ್ಚು ರಾಷ್ಟ್ರಗಳ ಪ್ರತಿನಿಧಿಗಳನ್ನು ಆಕರ್ಷಿಸಿತ್ತು. ತಂತ್ರಜ್ಞಾನ ಮತ್ತು ನಾವೀನ್ಯತೆ ಕುರಿತು ಜಾಗತಿಕ ಮಟ್ಟದ ಸಂವಾದಕ್ಕೆ ಈ ವೇದಿಕೆ ಸಾಕ್ಷಿಯಾಯಿತು. ಶಾಸಕ ಶರತ್ ಬಚ್ಚೇಗೌಡ ಸೇರಿದಂತೆ ರಾಜ್ಯದ ಹಲವು ಪ್ರಮುಖ ನಾಯಕರು ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

ಸ್ಟಾರ್‌ಗಳಿಂದ ‘ಸ್ಪೂರ್ತಿ ಮಂತ್ರ’:

ಇಂದಿನ ಪ್ರಮುಖ ಕಾರ್ಯಕ್ರಮವಾಗಿ ಹಮ್ಮಿಕೊಂಡಿದ್ದ ‘ಫ್ಯೂಚರ್ ಮೇಕರ್ಸ್ ಕಾನ್‌ಕ್ಲೈವ್’ ನಲ್ಲಿ ಭಾಗವಹಿಸಿದ್ದ ಸುಮಾರು 10,000 ಸ್ಟಾರ್ಟ್‌ಅಪ್ ಫೌಂಡರ್‌ಗಳಿಗೆ ಖ್ಯಾತ ಕ್ರೀಡಾತಾರೆ ಸಾನಿಯಾ ಮಿರ್ಜಾ, ಉದ್ಯಮಿ ಶುಭಾಂಶು ಶುಕ್ಲಾ ಮತ್ತು ಕ್ರಿಕೆಟ್ ಆಟಗಾರ್ತಿ ರಿಚಾ ಘೋಷ್ ಅವರು ತಮ್ಮ ಯಶೋಗಾಥೆ ಹಾಗೂ ಜೀವನದ ಅನುಭವಗಳನ್ನು ಹಂಚಿಕೊಂಡಿದ್ದು ವಿಶೇಷ ಆಕರ್ಷಣೆಯಾಗಿತ್ತು. ಉದಯೋನ್ಮುಖ ಉದ್ಯಮಿಗಳಿಗೆ ಈ ಅನುಭವಗಳು ಸ್ಫೂರ್ತಿ ತುಂಬಿದವು.

ಕರ್ನಾಟಕಕ್ಕೆ ‘ಡೀಪ್ ಟೆಕ್’ ಹೂಡಿಕೆಯ ಬಂಪರ್ ಕೊಡುಗೆ:

ಸಮಾವೇಶದ ಕೊನೆಯ ದಿನವಾದ ಇಂದು ಮಾತನಾಡಿದ ಐಟಿ ಮತ್ತು ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಹತ್ವದ ಘೋಷಣೆ ಮಾಡಿದರು. ಬೆಂಗಳೂರು ಟೆಕ್ ಸಮ್ಮಿಟ್‌ನ ಯಶಸ್ಸಿನ ಫಲವಾಗಿ, ರಾಜ್ಯದಲ್ಲಿನ ‘ಡೀಪ್ ಟೆಕ್’ ಯೋಜನೆಗಳಿಗಾಗಿ 786.43 ಕೋಟಿ ಬೃಹತ್ ಹೂಡಿಕೆ ಹರಿದುಬಂದಿದೆ ಎಂದು ತಿಳಿಸಿದರು. ಸರ್ಕಾರ ಮತ್ತು ಖಾಸಗಿ ವಲಯದ ಸಹಭಾಗಿತ್ವದಿಂದ ಈ ಸಾಧನೆ ಸಾಧ್ಯವಾಗಿದೆ. ಇದು ಕರ್ನಾಟಕವನ್ನು ಜಾಗತಿಕ ತಂತ್ರಜ್ಞಾನ ನಕ್ಷೆಯಲ್ಲಿ ಮತ್ತಷ್ಟು ಬಲಪಡಿಸಿದೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.

error: Content is protected !!