Friday, December 26, 2025

ಒಂದೇ ದಿನ 62 ಫ್ಲೈಟ್ ಕ್ಯಾನ್ಸಲ್: ಬೆಂಗಳೂರು ಏರ್​ಪೋರ್ಟ್​ನಲ್ಲಿ ಜನವೋ ಜನ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಯಾಣಿಕರ ಓಡಾಟದಿಂದ ಸದಾ ಕಿಕ್ಕಿರಿದಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬುಧವಾರ ಅಸಾಮಾನ್ಯ ಸ್ಥಿತಿಗೆ ಸಾಕ್ಷಿಯಾಯಿತು. ತಾಂತ್ರಿಕ ದೋಷ, ಮಂಜಿನ ವಾತಾವರಣ ಹಾಗೂ ಸಿಬ್ಬಂದಿ ಕೊರತೆ ಸೇರಿದಂತೆ ಹಲವು ಕಾರಣಗಳಿಂದ ಇಂಡಿಗೋ ಏರ್‌ಲೈನ್ಸ್‌ನ 62 ವಿಮಾನ ಸೇವೆಗಳು ರದ್ದುಗೊಂಡಿತ್ತು. ಇದರಲ್ಲಿ 31 ಆಗಮಿಸುವ ಮತ್ತು 31 ಹೊರಡುವ ವಿಮಾನಗಳು ಸೇರಿವೆ. ಪ್ರತಿದಿನ ಸರಾಸರಿ 750ಕ್ಕಿಂತ ಹೆಚ್ಚು ವಿಮಾನಗಳ ಮೂಲಕ ಸೇವೆ ನೀಡುವ ಇಂಡಿಗೋ ಸಂಸ್ಥೆಗೆ ಇದು ದೊಡ್ಡ ಹಿನ್ನಡೆಯಾಗಿ ಪರಿಣಮಿಸಿದೆ.

ಕಳೆದ ಕೆಲ ದಿನಗಳಿಂದಲೇ ಬೆಂಗಳೂರಿನ ಸುತ್ತಮುತ್ತ ಮಂಜಿನ ತೀವ್ರತೆ ಹೆಚ್ಚಾಗಿದ್ದು, ಇದರ ಪರಿಣಾಮವಾಗಿ ವಿಮಾನಗಳ ಉಡಾಣ ಹಾಗೂ ಲ್ಯಾಂಡಿಂಗ್‌ನಲ್ಲಿ ವಿಳಂಬವಾಗುತ್ತಿದೆ. ಆದರೆ ಬುಧವಾರ ಸಮಸ್ಯೆ ಇನ್ನಷ್ಟು ಗಂಭೀರವಾಗಿ ತಾಂತ್ರಿಕ ದೋಷ ಹಾಗೂ ನೆಟ್‌ವರ್ಕ್ ವ್ಯತ್ಯಯವೂ ಸೇರಿಕೊಂಡು ವ್ಯಾಪಕವಾಗಿ ಸೇವೆ ರದ್ದಾಗುವಂತಾಯಿತು. ಇದರಿಂದ ನೂರಾರು ಪ್ರಯಾಣಿಕರು ಗಂಟೆಗಳ ಕಾಲ ವಿಮಾನ ನಿಲ್ದಾಣದಲ್ಲೇ ಕಾಯುವ ಪರಿಸ್ಥಿತಿ ಎದುರಾಯಿತು.

ಈ ಕುರಿತು ಇಂಡಿಗೋ ಸಂಸ್ಥೆ ಸ್ಪಷ್ಟನೆ ನೀಡಿದ್ದು, ಕಳೆದ ಎರಡು ದಿನಗಳಿಂದ ನೆಟ್‌ವರ್ಕ್ ಸಂಬಂಧಿತ ತಾಂತ್ರಿಕ ಸಮಸ್ಯೆ ಎದುರಾಗಿದ್ದು, ಅದನ್ನು ತುರ್ತಾಗಿ ಸರಿಪಡಿಸುವ ಕಾರ್ಯ ನಡೆಯುತ್ತಿದೆ ಎಂದು ತಿಳಿಸಿದೆ. ಈ ನಡುವೆ ಪ್ರಯಾಣಿಕರಿಗೆ ಪರ್ಯಾಯ ವಿಮಾನ ವ್ಯವಸ್ಥೆ ಕಲ್ಪಿಸಲಾಗುತ್ತಿದ್ದು, ಅಗತ್ಯವಿದ್ದಲ್ಲಿ ಟಿಕೆಟ್ ಮೊತ್ತವನ್ನು ಮರುಪಾವತಿಸಲಾಗುತ್ತದೆ ಎಂದೂ ಇಂಡಿಗೋ ಹೇಳಿದೆ.

error: Content is protected !!