ಹೊಸದಿಗಂತ ಡಿಜಿಟಲ್ ಡೆಸ್ಕ್:
ರಷ್ಯಾದ ಪೂರ್ವ ಕರಾವಳಿಯ ಕಮ್ಚಟ್ಕಾ ಪ್ರದೇಶದಲ್ಲಿ ಇಂದು ಬೆಳಗಿನ ಜಾವ ಭೂಕಂಪನ ಸಂಭವಿಸಿದೆ. ಯುಎಸ್ ಭೂವೈಜ್ಞಾನಿಕ ಸಮೀಕ್ಷೆ ಮತ್ತು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರಗಳ ಪ್ರಕಾರ, ರಿಕ್ಟರ್ ಮಾಪಕದಲ್ಲಿ 7.4 ತೀವ್ರತೆಯ ಭೂಕಂಪ ದಾಖಲಾಗಿದ್ದು, ಕೇಂದ್ರಬಿಂದು 10 ಕಿಲೋಮೀಟರ್ ಆಳದಲ್ಲಿ ಪತ್ತೆಯಾಗಿದೆ.
ಈ ಭೂಕಂಪದ ತೀವ್ರತೆಯಿಂದಾಗಿ ರಷ್ಯಾದ ಕರಾವಳಿ ಪ್ರದೇಶದಲ್ಲಿ ಜನತೆ ಆತಂಕಕ್ಕೊಳಗಾಗಿದ್ದು, ಸುನಾಮಿ ಸಂಭವಿಸುವ ಭೀತಿ ವ್ಯಕ್ತವಾಗಿದೆ. ಕಳೆದ ತಿಂಗಳಲ್ಲೇ ಇದೇ ಪ್ರದೇಶದಲ್ಲಿ 8.8 ತೀವ್ರತೆಯ ಭೂಕಂಪ ಸಂಭವಿಸಿ, ಸುನಾಮಿ ಅಲೆಗಳು ಕರಾವಳಿಯನ್ನು ಅಪ್ಪಳಿಸಿದ್ದವು. ಅದೇ ನೆನಪು ಇನ್ನೂ ತಾಜಾ ಇರುವುದರಿಂದ ಜನರ ಭಯ ಮತ್ತಷ್ಟು ಹೆಚ್ಚಾಗಿದೆ.
ಇದೀಗಿನ ಭೂಕಂಪದಲ್ಲಿ ಪ್ರಾಣಾಪಾಯ ಅಥವಾ ಆಸ್ತಿ ಹಾನಿ ಕುರಿತು ಯಾವುದೇ ಅಧಿಕೃತ ವರದಿ ಹೊರಬಿದ್ದಿಲ್ಲ. ಆದರೂ ತುರ್ತು ನಿರ್ವಹಣಾ ತಂಡಗಳು ಎಚ್ಚರಿಕೆಯಿಂದ ಕಾರ್ಯಾಚರಣೆ ಆರಂಭಿಸಿದ್ದು, ಕರಾವಳಿಯಲ್ಲಿನ ಜನರನ್ನು ಜಾಗೃತಗೊಳಿಸಲಾಗುತ್ತಿದೆ.