ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 77ನೇ ಗಣರಾಜ್ಯೋತ್ಸವದ ಸಂಭ್ರಮ ಮುಗಿಲು ಮುಟ್ಟಿದ್ದು. ನಗರದ ಮಾಣೆಕ್ ಶಾ ಪರೇಡ್ ಮೈದಾನದಲ್ಲಿ ಆಯೋಜಿಸಲಾಗಿದ್ದ ಈ ಸಡಗರದ ಕಾರ್ಯಕ್ರಮದಲ್ಲಿ ಭಾನುವಾರ ಬೆಳಿಗ್ಗೆ ಸರಿಯಾಗಿ 9 ಗಂಟೆಗೆ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಧ್ವಜಾರೋಹಣ ನೆರವೇರಿಸಿದರು. ರಾಷ್ಟ್ರಗೀತೆಯ ಇಂಪಿನೊಂದಿಗೆ ತ್ರಿವರ್ಣ ಧ್ವಜವು ಆಕಾಶದಲ್ಲಿ ರಾರಾಜಿಸಿತು.
ಧ್ವಜಾರೋಹಣದ ನಂತರ ರಾಜ್ಯಪಾಲರು ಪೊಲೀಸರಿಂದ ವಂದನಾ ಗೌರವ ಸ್ವೀಕರಿಸಿ, ತೆರೆದ ವಾಹನದಲ್ಲಿ ಪರೇಡ್ ವೀಕ್ಷಣೆ ಮಾಡಿದರು. ನಂತರ ನಾಡಿನ ಜನತೆಯನ್ನುದ್ದೇಶಿಸಿ ಮಾತನಾಡಿದ ಅವರು, ಸಂವಿಧಾನದ ಮಹತ್ವ ಹಾಗೂ ರಾಜ್ಯದ ಪ್ರಗತಿಯ ಕುರಿತು ಬೆಳಕು ಚೆಲ್ಲಿದರು. ಈ ಐತಿಹಾಸಿಕ ಕ್ಷಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಿರಿಯ ನಾಯಕರು ಹಾಗೂ ಗಣ್ಯರು ಸಾಕ್ಷಿಯಾದರು.
ಈ ಬಾರಿಯ ಪರೇಡ್‌ನಲ್ಲಿ ವಿವಿಧ ಶಾಲಾ-ಕಾಲೇಜುಗಳ ಸುಮಾರು 516 ವಿದ್ಯಾರ್ಥಿಗಳು ಪಾಲ್ಗೊಂಡು ಶಿಸ್ತಿನ ಪಥಸಂಚಲನ ನಡೆಸಿದರು. ಕಾರ್ಯಕ್ರಮದ ಯಶಸ್ಸಿಗಾಗಿ ಹಾಗೂ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಸುಮಾರು 2,000 ಪೊಲೀಸರನ್ನು ಭದ್ರತೆಗಾಗಿ ನಿಯೋಜಿಸಲಾಗಿತ್ತು. ಸಾರ್ವಜನಿಕರ ಅನುಕೂಲಕ್ಕಾಗಿ ಈ ಬಾರಿ ಆನ್‌ಲೈನ್ ಮೂಲಕ 2,000 ಇ-ಪಾಸ್ ವ್ಯವಸ್ಥೆ ಮಾಡಿದ್ದು ವಿಶೇಷವಾಗಿತ್ತು.




