Monday, January 12, 2026
Monday, January 12, 2026
spot_img

ಆಳ್ವಾಸ್ ನಲ್ಲಿ 85ನೇ ಅಖಿಲ ಭಾರತ ಅಂತರ್ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ ಗೆ ವಿಧ್ಯುಕ್ತ ಚಾಲನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನವು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಇಲ್ಲಿನ ಸ್ವರಾಜ್ ಮೈದಾನದಲ್ಲಿ ಹಮ್ಮಿಕೊಂಡ ಐದು ದಿನಗಳ ‘85ನೇ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್ 2025-26’ ಸೋಮವಾರ ಅಚ್ಚುಕಟ್ಟಾದ ಮೂಲಸೌಕರ್ಯ, ತಾಂತ್ರಿಕ ನಿಖರತೆ, ಸಮಯ ನಿರ್ವಹಣೆ, ಆತಿಥ್ಯ ವ್ಯವಸ್ಥೆಗಳ, ಶಿಸ್ತುಬದ್ಧತೆ, ಅದ್ಧೂರಿ ಮೆರವಣಿಗೆಗಳ ಜೊತೆ ಆರಂಭಗೊಂಡಿತು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆತಿಥ್ಯದಲ್ಲಿ 6ನೇ ಬಾರಿಗೆ (72, 75, 80, 79 ಹಾಗೂ 81) ನಡೆಯುತ್ತಿರುವ 85ನೇ ಕ್ರೀಡಾಕೂಟವನ್ನು ಉದ್ಘಾಟಿಸಿದ ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್ ಮಾತನಾಡಿ, ‘ಆಳ್ವಾಸ್ ನಲ್ಲಿ ನಡೆಯುವ ಕ್ರೀಡಾಕೂಟವು ಜಾಗತಿಕ ಕೂಟಕ್ಕೆ ಮಾದರಿ. ದೇಶದ ಎಲ್ಲ ಕ್ರೀಡಾಕೂಟಗಳಿಗೂ ಹೆಗ್ಗುರುತು’ ಎಂದು ಶ್ಲಾಘಿಸಿದರು.

‘ವಿಶ್ವದ ಸಂಸ್ಕೃತಿಗಳ ಸಾರ ಭಾರತದ ಸಂಸ್ಕೃತಿಗಳ, ಭಾರತದ ಸಂಸ್ಕೃತಿ ಸಾರ ಕರ್ನಾಟಕ, ಕರ್ನಾಟಕದ ಸಂಸ್ಕೃತಿಗಳ ಸಾರ ದಕ್ಷಿಣ ಕನ್ನಡ, ದಕ್ಷಿಣ ಕನ್ನಡದ ಸಂಸ್ಕ್ರತಿಯ ಸಾರ ಆಳ್ವಾಸ್ ನಲ್ಲಿ’ ಎಂದು ಬಣ್ಣಿಸಿದರು.

ಉದ್ಘಾಟನಾ ಸಂಕೇತವಾಗಿ ತ್ರಿವರ್ಣ ಬೆಲೂನು ಗಾಳಿಗೆ ಹಾರಿ ಬಿಡಲಾಯಿತು. ಕ್ರೀಡಾಜ್ಯೋತಿ ಬೆಳಗಿದ ಬಳಿಕ, ಕ್ರೀಡಾಪಟು ದೀಕ್ಷಿತಾ ರಾಮಕೃಷ್ಣ ಪ್ರತಿಜ್ಞಾ ವಿಧಿ ಬೋಧಿಸಿದರು.

ವಿಧಾನಸಭೆಯ ಸಭಾಪತಿ ಯು.ಟಿ. ಖಾದರ್ ಕ್ರೀಡಾ ಒಕ್ಕೂಟದ, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ.ಭಗವಾನ್ ಬಿ.ಸಿ. ವಿಶ್ವವಿದ್ಯಾಲಯದ ಹಾಗೂ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಧ್ವಜಾರೋಹಣ ನೆರವೇರಿಸಿದರು.

ಧನಲಕ್ಷ್ಮೀಗೆ ಸನ್ಮಾನ
ಮಹಿಳಾ ಕಬಡ್ಡಿ ವಿಶ್ವಕಪ್‌ ವಿಜೇತ ಭಾರತೀಯ ತಂಡ ಪ್ರತಿನಿಧಿಸಿದ ಧನಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು. ಬಳಿಕ ಸಿಡಿಮದ್ದಿನ ಪ್ರದರ್ಶನವು ಆಗಸದಲ್ಲಿ ಚಿತ್ತಾರ ಮೂಡಿಸಿತು.

ಕ್ರೀಡಾಕೂಟದಲ್ಲಿ ದೇಶದ 304ಕ್ಕೂ ಅಧಿಕ ವಿಶ್ವವಿದ್ಯಾಲಯಗಳ ನಾಲ್ಕು ಸಾವಿರಕ್ಕೂ ಅಧಿಕ ಅಥ್ಲೀಟ್‍ಗಳು ಹಾಗೂ ಸುಮಾರು 1000 ಕ್ರೀಡಾಧಿಕಾರಿಗಳು ಪಾಲ್ಗೊಂಡಿದ್ದಾರೆ.

ಕರ್ನಾಟಕ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೊಹಿಸೀನ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಸಚಿವ ಅರ್ಜುನ್, ಮಾಜಿ ಸಚಿವ ಅಭಯಚಂದ್ರ ಜೈನ್ , ಇಫ್ತಿಕರ್ ಅಲಿ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ವ್ಯವಸ್ಥಾಪಕ ಟ್ರಸ್ಟಿಗಳಾದ ವಿವೇಕ್ ಆಳ್ವ, ಡಾ.ವಿನಯ್ ಆಳ್ವ ಮತ್ತಿತರರು ಉಪಸ್ಥಿತರಿದ್ದರು. ರಾಜೇಶ್ ಡಿಸೋಜಾ, ವೇಣುಗೋಪಾಲ್, ರಾಮಚಂದ್ರ ಕಾರ್ಯಕ್ರಮ ನಿರೂಪಿಸಿದರು.

Most Read

error: Content is protected !!