ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಹಾತ್ಮರಿಗೆ ಏನನ್ನೇ ಕೊಟ್ಟರು ಅದು ಹತ್ತಾಗಿ ನಮಗೆ ಮರಳಿ ಬರುತ್ತದೆ. ಹಾಗೆಂದು ಇದು ವ್ಯಾಪಾರವಲ್ಲ. ಒಂದಕ್ಕೆ ಒಂದನ್ನು ಹಿಂತಿರುಗಿಸಿದರೆ ಅದು ವ್ಯಾಪಾರ ಎನಿಸುತ್ತದೆ. ಆದರೆ ಮಹಾತ್ಮರಿಗೆ ನಾವು ಶುದ್ಧ ಮನಸ್ಸಿನಿಂದ ಸಮರ್ಪಿಸಿದಾಗ, ದೊಡ್ಡದ್ದನ್ನೇ ನಾವು ಮರಳಿ ಪಡೆಯಬಹುದು ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹೇಳಿದರು.

ಶ್ರೀಗಳು ಬೆಂಗಳೂರಿನ ಗಿರಿನಗರದಲ್ಲಿರುವ ಶ್ರೀರಾಮಚಂದ್ರಾಪುರ ಮಠದ ಶಾಖೆಯಲ್ಲಿ ನಡೆಯುತ್ತಿರುವ ‘ನವರಾತ್ರ ನಮಸ್ಯಾ’ ಕಾರ್ಯಕ್ರಮದಲ್ಲಿ ಬುಧವಾರ ಲಲಿತೋಪಾಖ್ಯಾನ ಕುರಿತು ಪ್ರವಚನವನ್ನು ನೀಡಿದರು.
ರಾಜರಾಜೇಶ್ವರಿಯು ಭೋಗ ಹಾಗೂ ಮೋಕ್ಷ ಎರಡನ್ನೂ ಅನುಗ್ರಹಿಸುತ್ತಾಳೆ. ಇಂದು ಮೋಕ್ಷ ಎಂದಾಗ ಜನರು ದೂರ ಹೋಗುತ್ತಾರೆ. ನಾನು ಈ ಜಗತ್ತಿನಲ್ಲಿ ಅನುಭವಿಸುವಂತದ್ದು ಹಲವಿದೆ, ಜೀವನದ ಸಂಧ್ಯಾಕಾಲದಲ್ಲಿ ಮೋಕ್ಷದ ಬಗ್ಗೆ ಅಲೋಚಿಸೋಣ ಎಂಬ ಭಾವವನ್ನು ಕಾಣುತ್ತೇವೆ. ಆದರೆ ಆ ಭಾವ ಸರಿಯಲ್ಲ. ರಾಜರಾಜೇಶ್ವರಿಯನ್ನು ಆಶ್ರಯಿಸಿದರೆ ಆಕೆ ಇಹದಲ್ಲಿ ಭೋಗವನ್ನೂ, ಪರದಲ್ಲಿ ಮೋಕ್ಷವನ್ನೂ ಅನುಗ್ರಹಿಸುತ್ತಾಳೆ ಎಂದು ಲಲಿತೋಪಾಖ್ಯಾನದ ಮಹತ್ವವನ್ನು ಸ್ವಾಮೀಜಿ ತಿಳಿಸಿದರು.

ಸಮಸ್ಯೆ ಬಂದಾಗ ಗುರುವಿನ ನೆನಪಾಗುತ್ತದೆ. ಮುಂದಿನ ದಾರಿ ಗೊತ್ತಾಗದೇ ಇದ್ದಾಗ ಗುರುವನ್ನು ಅರಸಿಕೊಂಡು ಹೋಗುವುದನ್ನು ಕಾಣುತ್ತೇವೆ. ಅದು ಸರಿಯಾದರೂ, ಉಳಿದ ಸಮಯದಲ್ಲೂ ಗುರುವನ್ನು ಆಶ್ರಯಿಸಿದರೆ ಜೀವನದಲ್ಲಿ ಉನ್ನತಿಯನ್ನು ಸಾಧಿಸಬಹುದು ಎಂದು ಇಂದ್ರನು ದುರ್ವಾಸರಿಂದ ಶಪಿತನಾದಾಗ, ಭಯಗೊಂಡ ಇಂದ್ರನು ದೇವಗುರುವಾದ ಬೃಹಸ್ಪತಿಯ ಮೊರೆ ಹೋಗುತ್ತಾನೆ ಎಂಬ ಕಥಾಭಾಗವನ್ನು ಶ್ರೀಗಳು ವಿವರಿಸಿದರು.

ಪಾಪ ಅಥವಾ ತಪ್ಪನ್ನು ಮಾಡಿದಾಗ ಪ್ರಾಯಶ್ಚಿತ್ತದ ಮೂಲಕ ಪಾಪವನ್ನು ತೊಳೆದುಕೊಳ್ಳಬಹುದು. ಪ್ರಾಯಶ್ಚಿತ್ತ ಸಾಧ್ಯವಾಗದಿದ್ದರೆ ಅಥವಾ ಪ್ರಾಯಶ್ಚಿತ್ತ ಇಲ್ಲದ ಪಾಪವಾದರೆ ಪಾಪದ ತಾಪವನ್ನು ಅನುಭವಿಸಿಯೇ ಕಳೆದುಕೊಳ್ಳಬೇಕು. ಇದಕ್ಕೇ ಇಂದ್ರನೂ ಹೊರತಲ್ಲ ಎಂದು ಲಲಿತೋಪಾಖ್ಯಾನದ ಕಥಾನಕವನ್ನು ಸ್ವಾಮೀಜಿ ವಿವರಿಸಿದರು.

ದುರ್ಗಾಮಂಟಪದಲ್ಲಿ ಪ್ರತಿಷ್ಠಾಪಿಸಿರುವ ರಾಜರಾಜೇಶ್ವರಿ ದೇವಿಗೆ ಪೂಜೆ, ಮಹಾಲಕ್ಷ್ಮೀ ಮಂತ್ರ ಹವನ, ದುರ್ಗಾ ಸಪ್ತಶತೀ ಪಾರಾಯಣ, ಮಾತೆಯರಿಂದ ಉಡಿಸೇವೆ, ವಿಶಿಷ್ಟವಾದ ‘ಅನ್ನಬ್ರಹ್ಮ ಸಂಕೀರ್ತನಮ್’, ದುರ್ಗಾದೀಪ ನಮಸ್ಕಾರ ಮುಂತಾದ ಕಾರ್ಯಕ್ರಮಗಳು ನಡೆದವು.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಕುಲಪತಿ ಡಾ. ಅಹಲ್ಯಾ ಎಸ್. ಶರ್ಮಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಶ್ರೀಗಳ ಆಶೀರ್ವಾದ ಪಡೆದರು. ಕೆ.ಎನ್. ಶಂಕರ್ ಹಾಲ್ತೋಟ, ದಿನಪ್ರಧಾನರಾಗಿ ಕೃಷ್ಣಾನಂದ ಭಟ್ ದಂಪತಿ ಉಪಸ್ಥಿತರಿದ್ದರು.



