October 15, 2026
Thursday, October 15, 2026
spot_img

ಬ್ಯಾಟಿಂಗ್ ಓಕೆ, ಬೌಲಿಂಗ್ ನಾಟ್ ಓಕೆ: 4ನೇ T20 ಸೋಲಿಗೆ ಶ್ರೇಯಸ್ ಅಯ್ಯರ್ ನೀಡಿದ ಕಾರಣವೇನು?

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ರೋಚಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಭಾರತ 24 ರನ್‌ಗಳ ಸೋಲನ್ನನುಭವಿಸಿದೆ. ವೆಸ್ಟ್ ಇಂಡೀಸ್ ನೀಡಿದ 248 ರನ್‌ಗಳ ಮೊತ್ತವನ್ನು ಬೆನ್ನಟ್ಟಿದ ಟೀಮ್ ಇಂಡಿಯಾ, ಬ್ಯಾಟರ್‌ಗಳ ಶ್ರಮದ ಹೊರತಾಗಿಯೂ 223 ರನ್‌ಗಳಿಗೆ ಆಲೌಟ್ ಆಯಿತು. ಈ ಸೋಲಿನ ಬಳಿಕ ಮಾತನಾಡಿದ ನಾಯಕ ಶ್ರೇಯಸ್ ಅಯ್ಯರ್, ತಮ್ಮ ಬೌಲರ್‌ಗಳ ಕಳಪೆ ಪ್ರದರ್ಶನದ ವಿರುದ್ಧ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಪಂದ್ಯ ಮುಗಿದ ನಂತರ ಮಾತನಾಡಿದ ಶ್ರೇಯಸ್, “ನಮ್ಮ ಸೋಲಿಗೆ ಬೌಲಿಂಗ್ ವೈಫಲ್ಯವೇ ಪ್ರಮುಖ ಕಾರಣ. ಬೌಲರ್‌ಗಳು ಸರಿಯಾದ ಲೈನ್ ಮತ್ತು ಲೆಂತ್ ಕಾಯ್ದುಕೊಳ್ಳಲು ವಿಫಲರಾದರು. ಯೋಜಿಸಿದ ತಂತ್ರಗಳನ್ನು ಮೈದಾನದಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ, 250 ರನ್‌ಗಳ ಗುರಿ ಬೆನ್ನಟ್ಟುವಾಗ ನಮ್ಮ ಬ್ಯಾಟರ್‌ಗಳು ತೋರಿಸಿದ ಆಕ್ರಮಣಕಾರಿ ಆಟ ಮೆಚ್ಚುವಂಥದ್ದು,” ಎಂದು ಬ್ಯಾಟಿಂಗ್ ಪಡೆಯನ್ನು ಬೆಂಬಲಿಸಿದರು.

ಪಿಚ್‌ನಲ್ಲಿದ್ದ ಹೆಚ್ಚುವರಿ ಬೌನ್ಸ್ ಮತ್ತು ನಿಧಾನಗತಿಯ ಸ್ಥಿತಿಯನ್ನು ವಿಂಡೀಸ್ ಬೌಲರ್‌ಗಳು ಅತ್ಯುತ್ತಮವಾಗಿ ಬಳಸಿಕೊಂಡರು. ಯುವ ಬ್ಯಾಟರ್ ಅಭಿಷೇಕ್ ಶರ್ಮಾಗೆ ಆರಂಭಿಕ ಓವರ್‌ಗಳಲ್ಲಿ ಹೆಚ್ಚು ಸ್ಟ್ರೈಕ್ ಸಿಗದಿರುವುದು ಸೋಲಿಗೆ ಕಾರಣವೇ ಎಂಬ ಪ್ರಶ್ನೆಗೆ, “ಖಂಡಿತ ಇಲ್ಲ, ನಾವು ಓವರ್‌ಗೆ 12 ರನ್‌ಗಳಂತೆ ಬ್ಯಾಟ್ ಮಾಡುತ್ತಿದ್ದೆವು. ಆದರೆ ವಿಂಡೀಸ್ ಪಡೆ ತಮಗಿದ್ದ ಅವಕಾಶವನ್ನು ಅಚ್ಚುಕಟ್ಟಾಗಿ ಬಳಸಿಕೊಂಡಿತು, ಅವರ ಈ ಗೆಲುವಿನ ಕ್ರೆಡಿಟ್ ಅವರಿಗೆ ಸಲ್ಲಬೇಕು,” ಎಂದು ಎದುರಾಳಿ ಪಡೆಯನ್ನು ಶ್ಲಾಘಿಸಿದರು.

ನಾಲ್ಕನೇ ಪಂದ್ಯದ ಸೋಲಿನಿಂದ ಧೃತಿಗೆಡದ ಶ್ರೇಯಸ್, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ 5ನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ಬಲವಾದ ಕಂಬ್ಯಾಕ್ ಮಾಡುವ ಭರವಸೆ ನೀಡಿದ್ದಾರೆ. “ನಾವು ಚೇಸಿಂಗ್ ವೇಳೆ 220 ರನ್ ದಾಟಿದ್ದೇವೆ, ಇದು ತಂಡದ ಧನಾತ್ಮಕ ಮನಸ್ಥಿತಿಯನ್ನು ತೋರಿಸುತ್ತದೆ. ಅಂತಿಮ ಪಂದ್ಯದಲ್ಲೂ ಇದೇ ಸಕಾರಾತ್ಮಕ ಶೈಲಿಯೊಂದಿಗೆ ಮೈದಾನಕ್ಕಿಳಿಯಲಿದ್ದೇವೆ. ಬೌಲಿಂಗ್ ಬಗ್ಗೆ ಅತಿಯಾಗಿ ಚಿಂತಿಸದೆ, ಹೊಸ ಮನಸ್ಥಿತಿ ಮತ್ತು ಸರಿಯಾದ ಯೋಜನೆಯೊಂದಿಗೆ ಕಣಕ್ಕಿಳಿದು ಟ್ರೋಫಿ ಗೆಲ್ಲುತ್ತೇವೆ,” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Must Read