ಹೊಸದಿಗಂತ ವರದಿ ಬೆಳಗಾವಿ:
ನಿಪ್ಪಾಣಿ ಪಟ್ಟಣದ ರಾಮಮಂದಿರ ಪರಿಸರದಲ್ಲಿರುವ ಬಡ ರೈತ ಚೈತನ್ಯ ಶಶಿಕಾಂತ ನೇಸರಿಕರ್ ಅವರಿಗೆ ಸೇರಿದ ಹಳೆಯ ಮನೆಗೆ ಗುರುವಾರ ಬೆಳಿಗ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿ, ಲಕ್ಷಾಂತರ ರೂ. ಮೌಲ್ಯದ ವಸ್ತುಗಳು ಸುಟ್ಟು ಕರಕಲಾದ ಘಟನೆ ನಡೆದಿದೆ.
ಮಣ್ಣಿನ ಗೋಡೆ ಹಾಗೂ ಹೆಂಚಿನ ಮೇಲ್ಛಾವಣಿ ಹೊಂದಿರುವ ಹಳೆಯ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡಾಗ ಮನೆಯವರು ಇರಲಿಲ್ಲ. ನೇಸರಿಕರ್ ಅವರು ಹೊಲಕ್ಕೆ ತೆರಳಿದ್ದರೆ, ಅವರ ಪತ್ನಿ ಮಕ್ಕಳೊಂದಿಗೆ ಸಂಬಂಧಿಕರ ಮನೆಗೆ ಹೋಗಿದ್ದರು. ಬೆಳಿಗ್ಗೆ ಸುಮಾರು 11 ಗಂಟೆಗೆ ಮನೆಯೊಳಗಿಂದ ದಟ್ಟ ಹೊಗೆ ಹಾಗೂ ಬೆಂಕಿಯ ಜ್ವಾಲೆಗಳು ಹೊರಬರುತ್ತಿರುವುದನ್ನು ಗಮನಿಸಿದ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು.
ಸ್ಥಳಕ್ಕೆ ಧಾವಿಸಿದ ನಿಪ್ಪಾಣಿ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯ ಆರಂಭಿಸಿದರು. ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಅಗ್ನಿಶಾಮಕ ವಾಹನವನ್ನು ಕರೆಸಲಾಯಿತು. ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರು ಸುಮಾರು ಒಂದು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು.
ಇದನ್ನೂ ಓದಿ:
ಅವಘಡದಲ್ಲಿ ಟಿವಿ, ಫ್ರಿಜ್, ಪ್ರಮುಖ ದಾಖಲೆಗಳು ಸೇರಿದಂತೆ ಮನೆಯಲ್ಲಿದ್ದ ಹಲವು ವಸ್ತುಗಳು ಸುಟ್ಟುಹೋಗಿದ್ದು,ಈ ಘಟನೆಯಲ್ಲಿ ಅಂದಾಜು ₹20 ಲಕ್ಷ ಹಾನಿಯಾಗಿದೆ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಕಾಣಿಸಿಕೊಂಡಿರಬಹುದು ಎಂದು ಶಂಕಿಸಲಾಗಿದ್ದು, ನಿಖರ ಕಾರಣ ತಿಳಿದುಬಂದಿಲ್ಲ. ಸ್ಥಳೀಯರ ಸಮಯಪ್ರಜ್ಞೆ ಹಾಗೂ ಅಗ್ನಿಶಾಮಕ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ಹೆಚ್ಚಿನ ಅನಾಹುತ ತಪ್ಪಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.



