October 15, 2026
Thursday, October 15, 2026
spot_img

ಕರ್ನಾಟಕದ ನೂತನ ರಾಜ್ಯಪಾಲರಾಗಿ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಡಾ. ಸುಧಾ ಯಾದವ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕರ್ನಾಟಕದ ರಾಜ್ಯಪಾಲರ ಸ್ಥಾನಕ್ಕೆ ಹೊಸ ಉತ್ತರಾಧಿಕಾರಿಯ ನೇಮಕವಾಗಿದ್ದು, ರಾಜಭವನದಲ್ಲಿ ಹೊಸ ಪರ್ವ ಆರಂಭವಾಗಿದೆ. ಬರೋಬ್ಬರಿ ಐದು ವರ್ಷಗಳ ಕಾಲ ಯಶಸ್ವಿಯಾಗಿ ಸೇವೆ ಸಲ್ಲಿಸಿದ ಥಾವರ್ ಚಂದ್ ಗೆಹ್ಲೋಟ್ ಅವರ ಅಧಿಕಾರಾವಧಿ ಪೂರ್ಣಗೊಂಡಿದ್ದು, ಅವರ ಸ್ಥಾನಕ್ಕೆ ಮಾಜಿ ಲೋಕಸಭಾ ಸಂಸದೆ ಹಾಗೂ ಕಾರ್ಗಿಲ್ ಹುತಾತ್ಮ ಯೋಧನ ಪತ್ನಿ ಡಾ. ಸುಧಾ ಯಾದವ್ ಅವರನ್ನು ಕರ್ನಾಟಕದ ನೂತನ ರಾಜ್ಯಪಾಲರನ್ನಾಗಿ ಕೇಂದ್ರ ಸರ್ಕಾರ ನಿಯೋಜಿಸಿದೆ.

ಪ್ರಸ್ತುತ ಬಿಜೆಪಿಯ ಅತ್ಯುನ್ನತ ಸಂಸದೀಯ ಮಂಡಳಿಯ ಸದಸ್ಯೆಯಾಗಿರುವ ಡಾ. ಸುಧಾ ಯಾದವ್ ಅವರು ನಾಳೆ ಅಧಿಕೃತವಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಇಂದು ಸಂಜೆ ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ

ನೂತನ ರಾಜ್ಯಪಾಲರಾದ ಡಾ. ಸುಧಾ ಯಾದವ್ ಅವರು ಇಂದು ಸಂಜೆ 6.45 ಕ್ಕೆ ಸರಿಯಾಗಿ ಬೆಂಗಳೂರಿನ ಎಚ್​​ಎಎಲ್​​ (HAL) ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ರಾಜ್ಯ ಸರ್ಕಾರದ ಪರವಾಗಿ ಇವರನ್ನು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಐಜಿಪಿ ಡಾ. ಎಂ.ಎ. ಸಲೀಂ ಹಾಗೂ ಗ್ರೇಟರ್​ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ​​​ ರಾವ್ ಅವರು ಬರಮಾಡಿಕೊಳ್ಳಲಿದ್ದಾರೆ. ತದನಂತರ ಅಕ್ಟೋಬರ್ 16 ರ ನಾಳೆ ಸಂಜೆ 7.30 ಕ್ಕೆ ಲೋಕಭವನದಲ್ಲಿ ವಿಶೇಷಾಧಿಕಾರಿಗಳಿಂದ ಅವರಿಗೆ ಗೌರವಪೂರ್ವಕ ಸ್ವಾಗತ ಸಿಗಲಿದೆ.

ಇದನ್ನೂ ಓದಿ:

ನಾಳೆ ಬೆಳಗ್ಗೆ 10 ಗಂಟೆಗೆ ಗಾಜಿನಮನೆಯಲ್ಲಿ ಪ್ರಮಾಣ ವಚನ

ಬಿಜೆಪಿಯ ಹಿರಿಯ ನಾಯಕಿ ಡಾ. ಸುಧಾ ಯಾದವ್ ಅವರ ಪದಗ್ರಹಣ ಸಮಾರಂಭವು ಅಕ್ಟೋಬರ್ 16 ರ ನಾಳೆ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಲೋಕಭವನದ ಗಾಜಿನಮನೆಯಲ್ಲಿ ಜರುಗಲಿದೆ. ಕರ್ನಾಟಕ ಹೈಕೋರ್ಟ್​​​​ನ ಮಾನ್ಯ ಮುಖ್ಯ ನ್ಯಾಯಮೂರ್ತಿಗಳು ನೂತನ ರಾಜ್ಯಪಾಲರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯ ಸರ್ಕಾರದ ಪ್ರಮುಖ ಸಚಿವರು, ವಿರೋಧ ಪಕ್ಷದ ಪ್ರಮುಖ ನಾಯಕರು ಹಾಗೂ ವಿವಿಧ ಇಲಾಖೆಗಳ ಗಣ್ಯರು ಭಾಗವಹಿಸಲಿದ್ದು, ರಾಜಭವನದಲ್ಲಿ ಈಗಾಗಲೇ ಎಲ್ಲಾ ರೀತಿಯ ಸಿದ್ಧತೆಗಳು ನಡೆದಿದೆ.

Must Read