October 15, 2026
Thursday, October 15, 2026
spot_img

ಹಾರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಹಡಗು: ಸಮುದ್ರದಲ್ಲಿ ತೇಲಿಬಂತು ಐಫೋನ್‌, ದುಬಾರಿ ಪರ್ಫ್ಯೂಮ್‌!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಸಂಘರ್ಷದ ನಡುವೆಯೇ ಹಾರ್ಮುಜ್ ಜಲಸಂಧಿಯಲ್ಲಿ ತೇಲಿಬಂದ ಐಫೋನ್‌ ಬಾಕ್ಸ್‌ಗಳು ಮತ್ತು ದುಬಾರಿ ಪರ್ಫ್ಯೂಮ್‌ ಬಾಟಲಿಗಳ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ.

ಸರಕು ಸಾಗಣೆ ಹಡಗೊಂದು ಸಮುದ್ರದಲ್ಲಿ ಮುಳುಗಿದ ಬಳಿಕ ಈ ವಸ್ತುಗಳು ನೀರಿನಲ್ಲಿ ಹರಡಿಕೊಂಡಿವೆ ಎನ್ನಲಾಗಿದ್ದು, ಸಣ್ಣ ದೋಣಿಗಳಲ್ಲಿದ್ದವರು ಅವುಗಳನ್ನು ಸಂಗ್ರಹಿಸುತ್ತಿರುವ ದೃಶ್ಯಗಳು ವೈರಲ್ ಆಗಿವೆ.

ಸ್ಫೋಟದ ಬಳಿಕ ಸಮುದ್ರದಲ್ಲಿ ಹರಡಿದ ಸರಕುಗಳು!

ವರದಿಗಳ ಪ್ರಕಾರ, ಸಿಂಗಾಪುರದ ಧ್ವಜ ಹೊಂದಿದ್ದ GFS Pride ಎಂಬ ಕಂಟೇನರ್ ಹಡಗು ಬುಧವಾರ ಅಪರಿಚಿತ ಉತ್ಕ್ಷೇಪಕದ ದಾಳಿಗೆ ಸಿಲುಕಿ ಬೆಂಕಿ ಹೊತ್ತಿಕೊಂಡ ಬಳಿಕ ಮುಳುಗಿದೆ. ಹಡಗಿನಲ್ಲಿದ್ದ 21 ಸಿಬ್ಬಂದಿಯನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದ್ದು, ಯಾವುದೇ ಗಾಯಗಳಾಗಿಲ್ಲ ಎಂದು ಸಿಂಗಾಪುರದ ಸಮುದ್ರ ಮತ್ತು ಬಂದರು ಪ್ರಾಧಿಕಾರ ತಿಳಿಸಿದೆ.

ಈ ಹಡಗು ದುಬೈನಿಂದ ಸರಕುಗಳನ್ನು ಸಾಗಿಸುತ್ತಿತ್ತು ಎನ್ನಲಾಗಿದೆ. ಸುಮಾರು 2,500 ಕಂಟೇನರ್‌ಗಳನ್ನು ಹೊಂದಿದ್ದ ಹಡಗಿನಲ್ಲಿ ಐಫೋನ್‌ಗಳು ಮತ್ತು ದುಬಾರಿ ಸುಗಂಧ ದ್ರವ್ಯಗಳೂ ಇದ್ದವು ಎಂದು ಕೆಲವು ವರದಿಗಳು ಹೇಳಿವೆ. ಹಡಗು ಮುಳುಗಿದ ಬಳಿಕ ಸರಕುಗಳು ಸಮುದ್ರದ ಮೇಲ್ಮೈಯಲ್ಲಿ ತೇಲುತ್ತಿರುವ ದೃಶ್ಯಗಳು ಹರಿದಾಡುತ್ತಿವೆ.

ಗಣಿ ಸ್ಫೋಟವೇ?, ಕ್ಷಿಪಣಿ ದಾಳಿಯೇ?

ಹಡಗು ಮುಳುಗಲು ಕಾರಣವೇನು ಎಂಬ ವಿಚಾರದಲ್ಲಿ ವಿಭಿನ್ನ ಹೇಳಿಕೆಗಳು ಹೊರಬಂದಿವೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಹಡಗು ನೌಕಾ ಗಣಿಗೆ ಡಿಕ್ಕಿ ಹೊಡೆದು ಮುಳುಗಿದೆ ಎಂದು ಹೇಳಿದೆ. ಆದರೆ, ಸಮುದ್ರ ಸಂಬಂಧಿತ ಅಧಿಕಾರಿಗಳ ಪ್ರಕಾರ, ಹಡಗಿಗೆ ಅಪರಿಚಿತ ಉತ್ಕ್ಷೇಪಕ ಅಪ್ಪಳಿಸಿತ್ತು ಎಂದಿದ್ದಾರೆ. ಹೀಗಾಗಿ ದುರಂತದ ನಿಖರ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.

ಹಾರ್ಮುಜ್ ನಲ್ಲಿ ಹೆಚ್ಚುತ್ತಿರುವ ಆತಂಕ

ಇತ್ತೀಚಿನ ದಿನಗಳಲ್ಲಿ ಹಾರ್ಮುಜ್ ಜಲಸಂಧಿ ಮತ್ತು ಸುತ್ತಮುತ್ತಲಿನ ಸಮುದ್ರ ಪ್ರದೇಶದಲ್ಲಿ ವಾಣಿಜ್ಯ ಹಡಗುಗಳ ಮೇಲಿನ ದಾಳಿಗಳು ಹೆಚ್ಚಾಗಿವೆ. ಇದೇ ಪ್ರದೇಶದ ಸಮೀಪ ಮತ್ತೊಂದು ಸರಕು ಹಡಗು Cape Dao ಕೂಡ ಹಿಂದಿನ ದಾಳಿಯ ಬಳಿಕ ಮುಳುಗಿತ್ತು ಎಂದು ವರದಿಯಾಗಿದೆ.

Must Read