ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮದ್ದೂರು ವಲಯದಲ್ಲಿ ಹುಲಿಯೊಂದು ಉರುಳಿಗೆ ಸಿಲುಕಿ ಮೃತಪಟ್ಟಿರುವುದು ಹಾಗೂ ಕರಡಿಕಲ್ಲು ಗುಡ್ಡ ಪ್ರದೇಶದಲ್ಲಿ ಕಾಡಾನೆಯೊಂದರ ದಂತ ನಾಪತ್ತೆಯಾಗಿರುವ ಘಟನೆಗಳ ಕುರಿತು ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ನಮ್ಮ ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣೆಯೇ ನಮಗೆ ಮೊದಲ ಆದ್ಯತೆಯಾಗಿದೆ. ಪ್ರಾಣಿಗಳ ರಕ್ಷಣೆಯಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯವನ್ನು ಸಹಿಸುವುದಿಲ್ಲ ಎಂದು ಎಚ್ಚರಿಸಿರುವ ಸಚಿವರು, ಈ ಸರಣಿ ಲೋಪಗಳ ಕುರಿತು ಸಮಗ್ರ ವೈಜ್ಞಾನಿಕ ತನಿಖೆ ನಡೆಸಿ, ಕೇವಲ ಒಂದು ವಾರದೊಳಗೆ ವರದಿಯನ್ನು ಸಲ್ಲಿಸುವಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ.
ವೈಜ್ಞಾನಿಕ ತನಿಖೆಗೆ ಆದೇಶ
ಬಂಡೀಪುರದ ಅರಣ್ಯ ಭಾಗದಲ್ಲೇ ಇಂತಹ ಗಂಭೀರ ಕೃತ್ಯಗಳು ನಡೆದಿರುವುದನ್ನು ಸಚಿವರು ತೀವ್ರವಾಗಿ ಪರಿಗಣಿಸಿದ್ದಾರೆ. ಹುಲಿ ಸಾವು ಮತ್ತು ಆನೆ ದಂತ ನಾಪತ್ತೆ ಈ ಎರಡೂ ಘಟನೆಗಳ ಹಿಂದೆ ಅಡಗಿರುವ ಕಳ್ಳಬೇಟೆಗಾರರ ಜಾಲದ ಮೂಲವನ್ನು ಪತ್ತೆಹಚ್ಚಲು ಹೈಟೆಕ್ ಮತ್ತು ವೈಜ್ಞಾನಿಕ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ
ಅರಣ್ಯ ಇಲಾಖೆಯ ಗಸ್ತು ತಿರುಗುವಿಕೆ ಹಾಗೂ ಕಣ್ಗಾವಲು ವ್ಯವಸ್ಥೆಯಲ್ಲಿ ಆಗಿರುವ ಲೋಪದೋಷಗಳನ್ನು ತಕ್ಷಣವೇ ಪತ್ತೆಹಚ್ಚಿ, ಕರ್ತವ್ಯದಲ್ಲಿ ಬೇಜವಾಬ್ದಾರಿತನ ತೋರಿದ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಲು ನಿರ್ದೇಶಿಸಿದ್ದಾರೆ.
ಖುದ್ದಾಗಿ ಸ್ಥಳ ಪರಿಶೀಲನೆಗೆ ಸೂಚನೆ
ಕೇವಲ ಕಚೇರಿಗಳಲ್ಲೇ ಕುಳಿತು ಮೇಲ್ವಿಚಾರಣೆ ನಡೆಸುವ ಅರಣ್ಯ ಅಧಿಕಾರಿಗಳ ಧೋರಣೆಗೆ ಸಚಿವರು ಬ್ರೇಕ್ ಹಾಕಿದ್ದಾರೆ. ಇಂದಿನಿಂದಲೇ ಜಾರಿಗೆ ಬರುವಂತೆ ರಾಜ್ಯದ ಎಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮತ್ತು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಕಡ್ಡಾಯವಾಗಿ ನಿಯಮಿತವಾಗಿ ಕಾಡಿನ ತಳಮಟ್ಟದ ಪ್ರದೇಶಗಳಿಗೆ ಖುದ್ದಾಗಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:
ಭದ್ರತೆ ಹೆಚ್ಚಿಸಲು ಸೂಚನೆ
ಬಂಡೀಪುರ ಸೇರಿದಂತೆ ಕರ್ನಾಟಕದ ಎಲ್ಲಾ ಸೂಕ್ಷ್ಮ ಅರಣ್ಯ ವಲಯಗಳಲ್ಲಿ ಗಸ್ತು ವ್ಯವಸ್ಥೆ, ಸಿಸಿಟಿವಿ ಕಣ್ಗಾವಲು ಹಾಗೂ ಕಳ್ಳಬೇಟೆ ತಡೆ ಕಾರ್ಯವಿಧಾನಗಳನ್ನು ತಕ್ಷಣವೇ ಬಲಪಡಿಸಬೇಕು ಮತ್ತು ಕಾಡಿನ ಸಂಪತ್ತನ್ನು ರಕ್ಷಿಸಲು ಹಗಲಿರುಳು ಅಲರ್ಟ್ ಆಗಿರಬೇಕು ಎಂದು ಸಚಿವ ರಾಮಲಿಂಗಾರೆಡ್ಡಿ ಅವರು ಅರಣ್ಯ ಪಡೆಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.



