ಹೊಸದಿಗಂತ ಡಿಜಿಟಲ್ ಡೆಸ್ಕ್:
ಮದುವೆಯ ಕನಸ್ಸನ್ನು ಹೊತ್ತುಕೊಂಡು ತನ್ನ ಇಳಿವಯಸ್ಸಿನಲ್ಲಿ ದೇಶ ಬಿಟ್ಟು ಭಾರತಕ್ಕೆ ಬಂದಿದ್ದ ವಿದೇಶಿ ಮಹಿಳೆಯ ಕೊಲೆಯಾಗಿದೆ.
ಭಾರತ ಮೂಲದ ಯುಕೆ ಪ್ರಜೆಯ ಬಣ್ಣ ಬಣ್ಣದ ಮಾತುಗಳನ್ನು ಕೇಳಿ ಅಮೆರಿಕದಿಂದ ಆತನನ್ನು ಮದುವೆಯಾಗಲು ಭಾರತದ ಪಂಜಾಬ್ಗೆ ಬಂದಿದ್ದ 72 ವರ್ಷದ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಯುಕೆ ಮೂಲದ 75 ವರ್ಷದ ವ್ಯಕ್ತಿಯನ್ನು ಈ ಮಹಿಳೆ ಪ್ರೀತಿಸುತ್ತಿದ್ದರು. ಮೃತ ಮಹಿಳೆಯನ್ನು ರೂಪಿಂದರ್ ಕೌರ್ ಪಂಧೇರ್ ಎಂದು ಗುರುತಿಸಲಾಗಿದೆ. ಆರೋಪಿಯನ್ನು ಚರಣ್ಜೀತ್ ಸಿಂಗ್ ಗ್ರೆವಾಲ್ ಎಂದು ಗರುತಿಸಲಾಗಿದೆ. ಆತ ರೂಪಿಂದರ್ನ ಮನವೊಲಿಸಿ ಮದುವೆಯಾಗುವುದಾಗಿ ಹೇಳಿ ಭಾರತಕ್ಕೆ ಕರೆಸಿಕೊಂಡು, ಸುಪಾರಿಕೊಟ್ಟು ಆಕೆಯ ಹತ್ಯೆ ಮಾಡಿಸಿದ್ದ.
ಜುಲೈನಲ್ಲಿ ಆಜೆ ಚರಣ್ಜೀತ್ ಆಹ್ವಾನದ ಮೇಲೆ ಭಾರತಕ್ಕೆ ಬಂದಿದ್ದರು. ಲುಧಿಯಾನ ಜಿಲ್ಲೆಯ ಕಿಲಾ ರಾಯ್‌ಪುರ ಗ್ರಾಮಕ್ಕೆ ಪ್ರಯಾಣಿಸಿದ ನಂತರ ರೂಪಿಂದರ್ ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಆಕೆಯ ಸಹೋದರಿ ಪದೇ ಪದೇ ಕರೆ ಮಾಡಲು ಪ್ರಯತ್ನಿಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಬಳಿಕ ಅವರು ಭಾರತದಲ್ಲಿರುವ ಅಮೆರಿಕ ರಾಯಭಾರ ಕಚೇರಿಯನ್ನು ಸಂಪರ್ಕಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಮದುವೆ ಸಂಭ್ರಮದಲ್ಲಿರಬೇಕಿದ್ದ ಕೌರ್ ನಿಗೂಢವಾಗಿ ಕಣ್ಮರೆಯಾಗಿದ್ದರು. ರೂಪಿಂದರ್ ಅವರನ್ನು ಪತ್ತೆಹಚ್ಚುವ ಪ್ರಯತ್ನದಲ್ಲಿದ್ದ ಪೊಲೀಸರಿಗೆ ಇತ್ತೀಚೆಗೆ ಭಯಾನಕ ಸತ್ಯವೊಂದರ ಸುಳಿವು ಸಿಕ್ಕಿತ್ತು. ಪೊಲೀಸರು ಗ್ರೆವಾಲ್ ಮತ್ತು ಅವರ ಸಹೋದರ ಸೇರಿದಂತೆ ಪ್ರಮುಖ ಶಂಕಿತರ ಹೆಸರನ್ನು ದಾಖಲಿಸಿ ಎಫ್‌ಐಆರ್ ದಾಖಲಿಸಿದ್ದಾರೆ, ಅವರು ತಲೆಮರೆಸಿಕೊಂಡಿದ್ದಾರೆ.