ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ ನಟ ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿ ದಾಳಿ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ಮಾಹಿತಿಯೊಂದು ಹೊರಕ್ಕೆ ಬಂದಿದೆ. ಆರೋಪಿಗಳಿಗೆ ಹಣ, ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಸುಪಾರಿ ನೀಡಿದ್ದರು ಎಂದು ತಿಳಿದುಬಂದಿದೆ.
ಪೊಲೀಸರು ಈಗಾಗಲೇ ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ವೇಳೆ ಬಿಷ್ಣೋಯ್ ಗ್ಯಾಂಗ್ನ ಅನಿಲ್ ಪಂಡಿತ್ ಎನ್ನುವವರು ಆರೋಪಿಗಳಿಗೆ 34,000 ಸಾವಿರ ರೂಪಾಯಿ ಹಣ ಹಾಗೂ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಹೇಳಿದ್ದರು. ಇದರಿಂದ ಸುಪಾರಿ ಪಡೆದೆವು ಎಂದು ಆರೋಪಿಗಳು ಹೇಳಿದ್ದಾರೆ.
ಘಟನೆಗೂ ಮುನ್ನ ಆರೋಪಿಗಳಿಗೆ ಮುಂಬೈನಲ್ಲಿದ್ದಾಗ ದಿನಕ್ಕೆ 5,000 ರೂ.ಯಿಂದ 10,000 ರೂ.ವರೆಗೆ ಆನ್ಲೈನ್ ಮೂಲಕ ಹಣ ಬರುತ್ತಿತ್ತು. ಪೊಲೀಸರಿಂದ ತಪ್ಪಿಸಿಕೊಳ್ಳಲು ಆರೋಪಿಗಳು ಸ್ಥಳೀಯ ಅಂಗಡಿಯಲ್ಲಿ ಅಥವಾ ಇತರೆ ವ್ಯಕ್ತಿಗಳ ಕ್ಯೂಆರ್ ಕೋಡ್ಗಳನ್ನು ಅನಿಲ್ ಪಂಡಿತ್ಗೆ ಕಳುಹಿಸಿ, ಆ ಮೂಲಕ ತಮ್ಮ ಖರ್ಚಿಗೆ ಹಣ ಪಡೆದುಕೊಳ್ಳುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.
ಗುಂಡಿನ ದಾಳಿ ನಡೆಸಿದ ಬಳಿಕ ಆರೋಪಿಗಳು ಅಂಧೇರಿ ರೈಲು ನಿಲ್ದಾಣ ತಲುಪಿ ಲೋಕಲ್ ರೈಲು ಹತ್ತಿ ಕೆಲ ನಿಲ್ದಾಣಗಳ ಬಳಿಕ ಇಳಿದುಕೊಂಡರು. ನಂತರ ಆನ್ಲೈನ್ ಟ್ಯಾಕ್ಸಿ ಮೂಲಕ ಸೂರತ್ ತಲುಪಿ, ಅಲ್ಲಿಂದ ಪುಣೆ-ಜೈಪುರ ರೈಲು ಹತ್ತಿದರು. ಪ್ರಯಾಣದ ಮಧ್ಯೆ ಪೊಲೀಸರಿಂದ ತಪ್ಪಿಸಿಕೊಳ್ಳಲು ತಮ್ಮ ಕೂದಲನ್ನು ಕತ್ತರಿಸಿ, ಬಟ್ಟೆಗಳನ್ನು ಬದಲಾಯಿಸಿಕೊಂಡಿದ್ದರು. ಕೋಟಾದಲ್ಲಿ ಅವರನ್ನು ಬಂಧಿಸಿದಾಗ ಅವರ ವೇಷಭೂಷಣವೇ ಬದಲಾಗಿತ್ತು. ಅವರ ಬಳಿ ಬಟ್ಟೆಗಳು ಮಾತ್ರ ಸಿಕ್ಕಿದ್ದು, ಯಾವುದೇ ಆಯುಧಗಳು ಪತ್ತೆಯಾಗಿಲ್ಲ. ಆಯುಧಗಳನ್ನು ಎಲ್ಲೋ ಬಿಸಾಕಿರಬಹುದು ಎಂದು ಶಂಕಿಸಲಾಗಿದೆ.



