October 20, 2026
Tuesday, October 20, 2026
spot_img

ಕೋಚ್ ಜೊತೆ ಕಿರಿಕ್, ತಂಡ ತೊರೆದ ಬೆನ್ನಲ್ಲೇ ರೊನಾಲ್ಡೊಗೆ ಶಾಕ್: 30 ದಿನ ನಿಷೇಧ ಹೇರಿದ ಫೆಡರೇಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಫುಟ್‌ಬಾಲ್ ಜಗತ್ತಿನ ದಿಗ್ಗಜ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊಗೆ ಪೋರ್ಚುಗಲ್ ಫುಟ್‌ಬಾಲ್ ಫೆಡರೇಷನ್ (FPF) ಶಿಸ್ತು ಕ್ರಮ ಕೈಗೊಂಡಿದೆ.

ರಾಷ್ಟ್ರೀಯ ತಂಡದ ಶಿಬಿರವನ್ನು ತೊರೆದ ಪ್ರಕರಣಕ್ಕೆ ಸಂಬಂಧಿಸಿದಂತೆ ರೊನಾಲ್ಡೊಗೆ 30 ದಿನಗಳ ಅಮಾನತು ಹಾಗೂ 255 ಯುರೋ ದಂಡ ವಿಧಿಸಲಾಗಿದೆ ಎಂದು ಫೆಡರೇಷನ್ ಹೇಳಿದೆ. 41 ವರ್ಷದ ಸ್ಟಾರ್ ಆಟಗಾರನ ವಿರುದ್ಧದ ಆರೋಪವನ್ನು ಶಿಸ್ತು ಸಮಿತಿ ಎತ್ತಿಹಿಡಿದಿದ್ದು, ಅವರು ತಪ್ಪೊಪ್ಪಿಕೊಂಡಿರುವುದು ಮತ್ತು ಹಿಂದಿನ ಶಿಸ್ತು ದಾಖಲೆ ಉತ್ತಮವಾಗಿರುವುದು ಶಿಕ್ಷೆಯ ಪ್ರಮಾಣ ಕಡಿಮೆಯಾಗಲು ಕಾರಣವಾಗಿದೆ ಎಂದು ವರದಿಗಳು ತಿಳಿಸಿವೆ.

ಕೋಚ್ ಜೊತೆಗಿನ ಭಿನ್ನಾಭಿಪ್ರಾಯವೇ ವಿವಾದಕ್ಕೆ ಕಾರಣ!

ನಾರ್ವೆ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶ ಸಿಗದ ಹಿನ್ನೆಲೆಯಲ್ಲಿ ರೊನಾಲ್ಡೊ ಮತ್ತು ತಂಡದ ಕೋಚ್ ಜಾರ್ಜ್ ಜೀಸಸ್ ನಡುವೆ ಭಿನ್ನಾಭಿಪ್ರಾಯ ಉಂಟಾಗಿತ್ತು ಎನ್ನಲಾಗಿದೆ. ಅಕ್ಟೋಬರ್ 1ರಂದು ಡೆನ್ಮಾರ್ಕ್ ವಿರುದ್ಧದ ಪಂದ್ಯಕ್ಕೂ ಮುನ್ನ ರೊನಾಲ್ಡೊ ತಂಡದ ಶಿಬಿರದಿಂದ ಹೊರನಡೆದಿದ್ದರು.

ನಾರ್ವೆ ವಿರುದ್ಧದ ಪಂದ್ಯದಲ್ಲಿ 30 ನಿಮಿಷ ಆಡಲು ಸಿದ್ಧರಿದ್ದೀರಾ ಎಂದು ಕೋಚ್ ಕೇಳಿದ್ದರು; ತಾನು ಒಪ್ಪಿಕೊಂಡು ದ್ವಿತೀಯಾರ್ಧದಿಂದ ಅಭ್ಯಾಸಕ್ಕೂ ಸಿದ್ಧನಾಗಿದ್ದರೂ ಮೈದಾನಕ್ಕಿಳಿಯುವ ಅವಕಾಶ ಸಿಗಲಿಲ್ಲ ಎಂದು ರೊನಾಲ್ಡೊ ಹೇಳಿಕೊಂಡಿದ್ದರು. ಆದರೆ, ಇಂತಹ ಯಾವುದೇ ಒಪ್ಪಂದ ನಡೆದಿರಲಿಲ್ಲ ಎಂದು ಜೀಸಸ್ ನಿರಾಕರಿಸಿದ್ದರು.

ಇದನ್ನೂ ಓದಿ:

ನವೆಂಬರ್ ಪಂದ್ಯಗಳಲ್ಲಿ ಆಡಲು ಅವಕಾಶ ಸಿಗುತ್ತಾ?

ಈ ಅಮಾನತು ಯಾವ ಪಂದ್ಯಗಳು ಅಥವಾ ತಂಡದ ಚಟುವಟಿಕೆಗಳಿಗೆ ಅನ್ವಯಿಸುತ್ತದೆ ಎಂಬುದನ್ನು ಫೆಡರೇಷನ್ ಸ್ಪಷ್ಟಪಡಿಸಿಲ್ಲ ಎಂದು ವರದಿಯಾಗಿದೆ. ಈಗಾಗಲೇ ಜಾರಿಯಲ್ಲಿದ್ದ ತಾತ್ಕಾಲಿಕ ಅಮಾನತು ಅವಧಿಯನ್ನು 30 ದಿನಗಳ ಶಿಕ್ಷೆಯಲ್ಲಿ ಪರಿಗಣಿಸಲಾಗುತ್ತದೆಯೇ ಎಂಬುದೂ ಸ್ಪಷ್ಟವಾಗಿಲ್ಲ.

ಮರಳುವ ವಿಶ್ವಾಸದಲ್ಲಿರುವ ರೊನಾಲ್ಡೊ

ತನ್ನ ಮೇಲೆ ವಿಧಿಸುವ ಯಾವುದೇ ಶಿಕ್ಷೆಯನ್ನು ಸ್ವೀಕರಿಸುವುದಾಗಿ ರೊನಾಲ್ಡೊ ತಿಳಿಸಿದ್ದಾರೆ. ನಾರ್ವೆ ಪಂದ್ಯದ ಬಳಿಕ ಅಭಿಮಾನಿಗಳಿಗೆ ಪ್ರತಿಕ್ರಿಯೆ ನೀಡದಿದ್ದಕ್ಕಾಗಿ ಮತ್ತು ತಂಡವನ್ನು ತೊರೆದಿದ್ದಕ್ಕಾಗಿ ಅವರು ಕ್ಷಮೆಯನ್ನೂ ಕೋರಿದ್ದಾರೆ. ಫೆಡರೇಷನ್ ಅಧ್ಯಕ್ಷ ಪೆಡ್ರೊ ಪ್ರೊಯೆನ್ಸಾ ಕೂಡ ರೊನಾಲ್ಡೊ ಪೋರ್ಚುಗಲ್ ತಂಡಕ್ಕೆ ಮಹತ್ವದ ಆಟಗಾರ ಎಂದು ಹೇಳಿದ್ದಾರೆ.

Must Read