Saturday, September 20, 2025

Hidden Camera | ಹೋಟೆಲ್‌ಗಳಲ್ಲಿ ಹಿಡನ್ ಕ್ಯಾಮೆರಾ ಇದ್ರೆ ಪತ್ತೆಹಚ್ಚೋದು ಹೇಗೆ?

ಹೋಟೆಲ್‌ಗಳು ಅತಿಥಿಗಳಿಗೆ ಸೌಕರ್ಯ ಮತ್ತು ಭದ್ರತೆ ಒದಗಿಸಲು ಉದ್ದೇಶಿಸಲ್ಪಟ್ಟಿದ್ದರೂ, ಇತ್ತೀಚಿನ ದಿನಗಳಲ್ಲಿ ಹಿಡನ್ ಕ್ಯಾಮೆರಾ ಪ್ರಕರಣಗಳು ಆತಂಕಕ್ಕೆ ಕಾರಣವಾಗಿವೆ. ಹಲವು ಸಮೀಕ್ಷೆಗಳ ಪ್ರಕಾರ, ನಾಲ್ವರಲ್ಲಿ ಒಬ್ಬ ಪ್ರಯಾಣಿಕನಾದರೂ ರೂಮ್‌ನಲ್ಲಿ ರಹಸ್ಯ ಕ್ಯಾಮೆರಾ ಪತ್ತೆಯಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಪ್ರಮುಖ ಹೋಟೆಲ್‌ಗಳು ಕಠಿಣ ನಿಯಮಗಳನ್ನು ಜಾರಿಗೊಳಿಸಿದರೂ, ಕೆಲ ಅಪ್ರಾಮಾಣಿಕ ಸಿಬ್ಬಂದಿಗಳು ಅಥವಾ ಹೊರಗಿನವರು ಖಾಸಗಿ ಸ್ಥಳಗಳಲ್ಲಿ ಗುಪ್ತ ಸಾಧನಗಳನ್ನು ಅಳವಡಿಸಿದ ಘಟನೆಗಳು ಬೆಳಕಿಗೆ ಬಂದಿವೆ.

ಲೈಟ್ ಆಫ್ ಮಾಡಿ ಪರಿಶೀಲನೆ
ಕೋಣೆಯ ಎಲ್ಲಾ ಲೈಟ್‌ಗಳನ್ನು ಆಫ್ ಮಾಡಿ, ಮೊಬೈಲ್ ಕ್ಯಾಮೆರಾ ಆನ್ ಮಾಡಿ ಸ್ಕ್ಯಾನ್ ಮಾಡಿದರೆ ಮಿನುಗುವ ಕೆಂಪು ಅಥವಾ ಹಸಿರು ಬೆಳಕು ಕಾಣಬಹುದು. ಇದು ಗುಪ್ತ ಕ್ಯಾಮೆರಾ ಇರುವ ಸೂಚನೆ.

ಕನ್ನಡಿಯ ಉಗುರು ಪರೀಕ್ಷೆ
ಕನ್ನಡಿಯ ಮೇಲೆ ಬೆರಳಿನ ಉಗುರು ಇಟ್ಟಾಗ ಪ್ರತಿಬಿಂಬದ ನಡುವೆ ಅಂತರವಿಲ್ಲದಿದ್ದರೆ ಅದು ದ್ವಿಮುಖ ಕನ್ನಡಿ ಆಗಿರಬಹುದು. ಇಂತಹ ಕನ್ನಡಿಗಳ ಹಿಂದೆ ಕ್ಯಾಮೆರಾ ಇರಬಹುದು.

ಹೋಟೆಲ್ ವೈ-ಫೈ ಸ್ಕ್ಯಾನ್
ವೈ-ಫೈಗೆ ಸಂಪರ್ಕಿಸಿ “ಫಿಂಗ್” ಅಥವಾ ಇತರ ನೆಟ್‌ವರ್ಕ್ ಸ್ಕ್ಯಾನರ್ ಬಳಸಿ ಪರಿಶೀಲಿಸಿದರೆ ಅಪರಿಚಿತ ಕ್ಯಾಮೆರಾ ಸಾಧನಗಳು ಪತ್ತೆಯಾಗಬಹುದು.

ಫೋನ್ ಕರೆ ಮೂಲಕ ಪರೀಕ್ಷೆ
ವೈರ್‌ಲೆಸ್ ಕ್ಯಾಮೆರಾಗಳು ಫೋನ್ ಕರೆ ವೇಳೆ ಶಬ್ದ ವ್ಯತ್ಯಯ ಉಂಟುಮಾಡುತ್ತವೆ. ಕೊಠಡಿಯಲ್ಲಿ ನಡೆದು ಮಾತನಾಡಿದಾಗ ಕೆಲವು ಭಾಗಗಳಲ್ಲಿ ಕ್ರ್ಯಾಕ್ಲಿಂಗ್ ಶಬ್ದ ಕೇಳಿಸಿದರೆ ಅನುಮಾನಿಸಬಹುದು.

ಫ್ಲ್ಯಾಶ್‌ಲೈಟ್ ಬಳಕೆ
ಮೊಬೈಲ್ ಫ್ಲ್ಯಾಶ್‌ಲೈಟ್ ಹೊಳೆಯಿಸಿದಾಗ ಕ್ಯಾಮೆರಾ ಲೆನ್ಸ್ ಬೆಳಕನ್ನು ಪ್ರತಿಫಲಿಸುತ್ತದೆ. ಅಸಹಜ ಹೊಳಪು ಕಂಡುಬಂದರೆ ಎಚ್ಚರಿಕೆ.

ಪತ್ತೆಹಚ್ಚುವ ಅಪ್ಲಿಕೇಶನ್‌ಗಳು
‘Hidden Camera Detector’, ‘Glint Finder’ ಅಥವಾ ನೆಟ್‌ವರ್ಕ್ ಸ್ಕ್ಯಾನರ್‌ಗಳಂತಹ ಅಪ್ಲಿಕೇಶನ್‌ಗಳು RF ಸಿಗ್ನಲ್‌ಗಳನ್ನು ಹಿಡಿದು ಅನುಮಾನಾಸ್ಪದ ಸಾಧನ ಪತ್ತೆ ಮಾಡುತ್ತವೆ.

ಪ್ರವಾಸ ಮತ್ತು ವಾಸ್ತವ್ಯದಲ್ಲಿ ಗೌಪ್ಯತೆ ಕಾಪಾಡಿಕೊಳ್ಳುವುದು ಅತೀ ಮುಖ್ಯ. ಹೋಟೆಲ್‌ಗಳಲ್ಲಿ ಹಿಡನ್ ಕ್ಯಾಮೆರಾ ಪ್ರಕರಣಗಳು ಅಪರೂಪವಾದರೂ, ಎಚ್ಚರಿಕೆಯಿಂದಿರುವುದು ಅಗತ್ಯ. ಸ್ವಯಂ ರಕ್ಷಣೆಗಾಗಿ ಸರಳ ಕ್ರಮಗಳನ್ನು ಅನುಸರಿಸುವುದು ಪ್ರತಿಯೊಬ್ಬ ಪ್ರಯಾಣಿಕನ ಜವಾಬ್ದಾರಿ.

ಇದನ್ನೂ ಓದಿ