ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೆಜಿಎಫ್ ಸಿನಿಮಾದಲ್ಲಿ ಮಿಂಚಿದ ನಟಿ ಶ್ರೀನಿಧಿ ಶೆಟ್ಟಿ ಇತ್ತೀಚೆಗೆ ಯಾವ ಸಿನಿಮಾಗಳಲ್ಲಿಯೂ ಕಾಣಿಸಿಕೊಂಡಿಲ್ಲ. ತೆಲುಗು ಸಿನಿ ಇಂಡಸ್ಟ್ರಿಯಲ್ಲಿ ಬ್ಯುಸಿ ಆಗಿರುವ ನಟಿಯ ಸಂಭಾವನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಆರಂಭವಾಗಿದೆ. ಶ್ರೀನಿಧಿ ತಮ್ಮ ಸಿನಿಮಾಗಳಿಗೆ ಎಂಟು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ ಎನ್ನುವ ಸುದ್ದಿ ವೈರಲ್ ಆಗಿದ್ದು, ಖುದ್ದು ಶ್ರೀನಿಧಿಯೇ ಇದಕ್ಕೆ ಉತ್ತರ ನೀಡಿದ್ದಾರೆ.
ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ ‘ಆದರ್ಶ ಕುಟುಂಬಮ್ ಹೌಸ್ ನಂ. 47’ (AK47) ಸಿನಿಮಾದ ಪ್ರಚಾರದ ವೇಳೆ ಅವರು ಮಾತನಾಡಿದ್ದಾರೆ. ಈ ಸಿನಿಮಾದಲ್ಲಿ ನಟ ವೆಂಕಟೇಶ್ ಜೊತೆ ಶ್ರೀನಿಧಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ನಾನು ಎಂಟು ವರ್ಷಗಳಲ್ಲಿ ಬರೀ ಆರು ಸಿನಿಮಾಗಳಲ್ಲಿ ಮಾತ್ರ ನಟನೆ ಮಾಡಿದ್ದೀನಿ. ಹೀಗಿದ್ದಾಗ ಅಷ್ಟೊಂದು ಸಂಭಾವನೆಗೆ ಬೇಡಿಕೆ ಇಡೋಕೆ ಸಾಧ್ಯವಾ? ಎಂದು ಪ್ರಶ್ನಿಸಿದ್ದಾರೆ. ನನಗೆ ಹಣಕ್ಕಿಂತ ಕಥೆ ಮುಖ್ಯ. ಶ್ರೀನಿಧಿ ಯಾವ ರೀತಿ ಕಥೆಗಳನ್ನು ಆಯ್ಕೆ ಮಾಡ್ಕೋತಾರೆ ಎಂದು ಜನ ಮಾತನಾಡುವುದು ಮುಖ್ಯ. ದುಡ್ಡೇ ಮುಖ್ಯ ಅನ್ನೋದಾಗಿದ್ರೆ ಎಂಟು ವರ್ಷಗಳಲ್ಲಿ ಬಂದ ಎಲ್ಲ ಆಫರ್ಗಳನ್ನು ಒಪ್ಪಿ ಸಿನಿಮಾ ಮಾಡಬೇಕಿತ್ತು.
ನಾನು ಕಥೆಗೆ ಪ್ರಾಮುಖ್ಯತೆ ಕೊಡುತ್ತೇನೆ. ಉಳಿದಿದ್ದೆಲ್ಲಾ ಆಮೇಲೆ. ಬರೀ ಹಣವನ್ನೇ ನೋಡುತ್ತಾ ಹೋದರೆ ಜೀವನದಲ್ಲಿ ತೃಪ್ತಿ ಅನ್ನೋದು ಇರೋದಿಲ್ಲ. ನಾನು ಮಾಡಿರುವ ಸಿನಿಮಾಗಳಲ್ಲಿ ಅಷ್ಟೊಂದು ಸಂಭಾವನೆ ಪಡೆದಿಲ್ಲ. ಮಾಡಿರೋ ಆರು ಸಿನಿಮಾಗಳಿಗೆ ಎಂಟು ಕೋಟಿ ರೂಪಾಯಿ ಕೊಡಿ ಎಂದು ಕೇಳೋಕೆ ಆಗುತ್ತದಾ? ಖಂಡಿತಾ ಇಲ್ಲ. ಸಿನಿಮಾಗಳನ್ನು ಮಾಡುತ್ತಾ ಹೋದಂತೆ ಸಂಭಾವನೆ ಹೆಚ್ಚಿಸಿಕೊಳ್ಳೋಣ. ಸಧ್ಯಕ್ಕಂತೂ ಅಷ್ಟೆಲ್ಲಾ ಹಣ ಪಡೆದಿಲ್ಲ ಹಾಗೂ ಕಡಿಮೆ ಸಿನಿಮಾಗಳನ್ನು ಮಾಡುತ್ತಿರುವುದಕ್ಕೆ ಉತ್ತಮ ಕಥೆ ಸಿಕ್ಕಿಲ್ಲ ಎನ್ನುವುದೇ ಕಾರಣ ಎಂದು ಶ್ರೀನಿಧಿ ಹೇಳಿದ್ದಾರೆ.



