Sunday, September 21, 2025

ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ ಭೀಕರ ಅಪಘಾತ: ಇಬ್ಬರ ದುರಂತ ಅಂತ್ಯ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ ಕಾರೊಂದು ನಿಂತಿದ್ದ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಮೃತರನ್ನು ದಿವ್ಯಾ ರಾಜ್ ಸಿಂಗ್ ರಾಥೋಡ್ (20), ಸಿದ್ಧಾಂತ್ ಆನಂದ್ ಶೇಖರ್ (20) ಎಂದು ಗುರುತಿಸಲಾಗಿದೆ. ಇನ್ನೂ ಹರ್ಷ್ ಮಿಶ್ರಾ (21) ಮತ್ತು ನಿಹಾರ್ ತಂಬೋಲಿ (20) ಗಾಯಗೊಂಡಿದ್ದಾರೆ.

ನಾಲ್ವರು ಪುಣೆಯ ಸಿಂಬಿಯೋಸಿಸ್ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದ ಬಿಬಿಎ ವಿದ್ಯಾರ್ಥಿಗಳು ಎಂದು ತಿಳಿದುಬಂದಿದೆ.

ನಾಲ್ವರು ವಿದ್ಯಾರ್ಥಿಗಳು ಲೋನಾವಾಲಾಕ್ಕೆ ತೆರಳಿದ್ದರು. ಗುರುವಾರ ಬೆಳಗ್ಗೆ 5:45ರ ಸುಮಾರಿಗೆ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಕ್ಯಾಂಪಸ್‌ಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ಮುಂಬೈ-ಬೆಂಗಳೂರು ಹೆದ್ದಾರಿಯಲ್ಲಿ ಬರುತ್ತಿದ್ದಾಗ ಪುಣೆಯ ಈದ್ಗಾ ಮೈದಾನದ ಬಳಿ ನಿಂತಿದ್ದ ಕಂಟೇನರ್ ಟ್ರಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ಪರಿಣಾಮ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಪೊಲೀಸರು ಟ್ರಕ್ ಚಾಲಕ ಮನೀಶ್ ಕುಮಾರ್ ಸೂರಜ್ ಮಣಿಪಾಲ್ ಎಂಬಾತನನ್ನು ವಶಕ್ಕೆ ಪಡೆದಿದ್ದು, ಅಪಘಾತದ ಕಾರಣವನ್ನು ಪತ್ತೆಹಚ್ಚುವಲ್ಲಿ ನಿರತರಾಗಿದ್ದಾರೆ.

ಇದನ್ನೂ ಓದಿ