ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿರುವ ‘ರಾಮಾಯಣ’ ಸಿನಿಮಾದಲ್ಲಿ ಸೀತಾ ಮಾತೆಯಾಗಿ ನಟಿಸಿರುವ ಸಾಯಿ ಪಲ್ಲವಿ ಇತ್ತೀಚೆಗೆ ಈ ಚಿತ್ರದ ಪ್ರಚಾರಕ್ಕಾಗಿ ನಟ ರಣ್ಬೀರ್ ಕಪೂರ್ ಹಾಗೂ ರವಿ ದುಬೆ ಜೊತೆಗೂಡಿ ‘ಕೌನ್ ಬನೇಗಾ ಕರೋಡ್ಪತಿ 18’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ನಿರೂಪಕ ಅಮಿತಾಭ್ ಬಚ್ಚನ್ ಅವರೊಂದಿಗೆ ಹಂಚಿಕೊಂಡ ಸ್ವಾರಸ್ಯಕರ ವಿಚಾರಗಳು ಪ್ರೇಕ್ಷಕರ ಗಮನ ಸೆಳೆದಿವೆ.
ಕಾರ್ಯಕ್ರಮದಲ್ಲಿ ಅಮಿತಾಭ್ ಬಚ್ಚನ್ ಅವರು, ನಿಮ್ಮ ಜೀವನಸಂಗಾತಿಯಲ್ಲಿ ಇರಬೇಕಾದ ಗುಣಗಳೇನು? ಎಂದು ಕೇಳಿದಾಗ, ಸಾಯಿ ಪಲ್ಲವಿ ಅತ್ಯಂತ ಸರಳವಾಗಿ ಉತ್ತರಿಸಿದರು. “ಮೊದಲನೆಯದಾಗಿ ಅವರು ಒಳ್ಳೆಯ ಮನುಷ್ಯನಾಗಿರಬೇಕು. ಸ್ವಾರ್ಥಿಯಾಗಿರಬಾರದು, ತಮ್ಮ ತಪ್ಪುಗಳನ್ನು ತಾವೇ ತಿದ್ದುಕೊಳ್ಳುವ ಮನೋಭಾವ ಇರಬೇಕು. ಯಾವುದೇ ತಪ್ಪಿಗೂ ಬೇರೆಯವರನ್ನು ಹೊಣೆ ಮಾಡಬಾರದು. ಇದರ ಜೊತೆಗೆ ಅವರಿಗೆ ಅಡುಗೆ ಮಾಡಲು ತಿಳಿದಿದ್ದರೆ ಇನ್ನು ಉತ್ತಮ!” ಎಂದು ನಗುತ್ತಾ ಹೇಳಿದರು.
ಡಾಕ್ಟರಿಂಗ್ ಮುಗಿಸಿ ನಟನೆಗೆ ಬಂದಿದ್ದರ ಬಗ್ಗೆ ಕೇಳಿದಾಗ, “ಇದೆಲ್ಲವೂ ದೇವರ ಬರಹ, ನಟನೆಯೇ ನನ್ನ ವಿಧಿ” ಎಂದು ಸಾಯಿ ಪಲ್ಲವಿ ಹೇಳಿದರು. ಇದನ್ನು ಕೇಳಿ ಅಮಿತಾಭ್ ಆಶ್ಚರ್ಯಚಕಿತರಾದಾಗ, ಮಧ್ಯ ಪ್ರವೇಶಿಸಿದ ರಣ್ಬೀರ್ ಕಪೂರ್, “ಸಾರ್, ಇದು ಸಾಕ್ಷಾತ್ ದೇವರು ಬರೆದುಕೊಟ್ಟ ‘ಪ್ರಿಸ್ಕ್ರಿಪ್ಷನ್’!” ಎಂದು ತಮಾಷೆಯಾಗಿ ಹೇಳಿದರು.
ರಾಮಾಯಣದಲ್ಲಿ ಸೀತೆಯ ಪಾತ್ರದ ಆಫರ್ ಬಂದಾಗ ಆದ ಅನುಭವವನ್ನು ಹಂಚಿಕೊಂಡ ಸಾಯಿ ಪಲ್ಲವಿ, “ಸಾಮಾನ್ಯವಾಗಿ ಯಾವುದೇ ಪಾತ್ರ ಮಾಡುವಾಗ ‘ನಾನು ಈ ಪಾತ್ರಕ್ಕೆ ಏನು ನೀಡಬಲ್ಲೆ’ ಎಂದು ಯೋಚಿಸುತ್ತಿದ್ದೆ. ಆದರೆ, ಸೀತಾ ಮಾತೆಯ ಪಾತ್ರ ಮಾಡುವಾಗ ‘ಈ ಪಾತ್ರದಿಂದ ನನಗೆಷ್ಟು ಜ್ಞಾನ ಸಿಗಬಹುದು’ ಎಂದು ಯೋಚಿಸಿದೆ. ಸೀತಾ ಮಾತೆಗೆ ಪ್ರಾರ್ಥಿಸಿ, ಯಾವುದೇ ಗೊಂದಲವಿಲ್ಲದೆ ಈ ಪಾತ್ರವನ್ನು ಒಪ್ಪಿಕೊಂಡೆ” ಎಂದಿದ್ದಾರೆ.
ಒಟ್ಟಿನಲ್ಲಿ ‘ರಾಮಾಯಣ’ ಸಿನಿಮಾ ಬಿಡುಗಡೆಗೂ ಮುನ್ನವೇ ಸಾಯಿ ಪಲ್ಲವಿ ಅವರ ಈ ಸರಳತೆ ಮತ್ತು ಮಾತುಗಳು ಅಭಿಮಾನಿಗಳ ಮನ ಗೆದ್ದಿವೆ.



