October 30, 2026
Friday, October 30, 2026
spot_img

ಕಬ್ಬು ಹೋರಾಟಗಾರರ ಪ್ರತಿಭಟನೆ ಮತ್ತಷ್ಟು ತೀವ್ರ : ನಾಳೆ ರಾಷ್ಟ್ರೀಯ ಹೆದ್ದಾರಿ ಬಂದ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಬೆಳೆಗಾರರ ಹೋರಾಟ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಂಡಿದ್ದು, ಗುರ್ಲಾಪುರದಲ್ಲಿ ನಡೆಯುತ್ತಿರುವ ಪ್ರತಿಭಟನೆ ಆರನೇ ದಿನಕ್ಕೆ ಕಾಲಿಟ್ಟಿದೆ. ಹೋರಾಟಗಾರರು ಇಂದು ಸಂಜೆ ಐದು ಗಂಟೆವರೆಗೆ ಸರ್ಕಾರಕ್ಕೆ ಗಡುವು ನೀಡಿದ್ದಾರೆ. ಅಷ್ಟರೊಳಗೆ ಕಬ್ಬಿನ ದರದ ನಿರ್ಧಾರ ಆಗದಿದ್ದರೆ ನಾಳೆ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಪ್ರತಿಭಟನೆ ಮಾಡಲು ನಿರ್ಧಾರ ಮಾಡಲಾಗಿದೆ.

ನಾಲ್ಕು ದಿನಗಳ ಹಿಂದೆ ಸಿಎಂ ಡಿ.ಕೆ. ಶಿವಕುಮಾರ್‌ ಸುವರ್ಣಸೌಧದಲ್ಲಿ ನಡೆದ ಸಭೆಯಲ್ಲಿ ಕಬ್ಬು ಬೆಳೆಗಾರರ ಬೇಡಿಕೆಗಳ ಕುರಿದು ಚರ್ಚೆ ನಡೆದಿತ್ತು. ಆದರೆ ಯಾವುದೇ ರೀತಿಯ ತೀರ್ಮಾನಕ್ಕೆ ಬರಲು ಆಗಿರಲಿಲ್ಲ. ಸರ್ಕಾರದ ವತಿಯಿಂದ ಸೂಕ್ತ ನಿರ್ಧಾರ ಕೈಗೊಳ್ಳಲು ಕಾಲಾವಕಾಶ ಕೊಡಿ ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದ್ದರು. ತಮ್ಮ ಬೇಡಿಕೆಗಳಿಗೆ ಶೀಘ್ರ ಸ್ಪಂದನೆ ನೀಡದಿದ್ದರೆ ರೈತರು ಹೋರಾಟ ಮುಂದುವರಿಸುತ್ತೇವೆ ಎಂದಿದ್ದರು.

ಇದೀಗ ಗುರ್ಲಾಪುರದಲ್ಲಿ ನಡೆಯುತ್ತಿರುವ ಹೋರಾಟ ಆರನೇ ದಿನಕ್ಕೆ ಕಾಲಿಟ್ಟಿದೆ. ರೈತರ ಬೇಡಿಕೆ ಈಡೇರಿಸಲು ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳಿಗೆ ಇಂದು ಸಂಜೆ 5 ಗಂಟೆಯವರೆಗೆ ಗಡುವು ನೀಡಲಾಗಿದೆ. ಕೇಂದ್ರ ಸರ್ಕಾರ ಕಬ್ಬಿನ ಎಂಎಸ್‌ಪಿ ಹೆಚ್ಚಿಸಬೇಕು, ರಾಜ್ಯ ಸರ್ಕಾರ ಪ್ರತಿ ಟನ್‌ಗೆ ₹1,000 ಬೆಂಬಲ ಬೆಲೆ ನೀಡಬೇಕು ಎಂಬುದು ರೈತರ ಪ್ರಮುಖ ಬೇಡಿಕೆಗಳಾಗಿವೆ. ಇದರ ಜೊತೆಗೆ ಸಕ್ಕರೆ ಕಾರ್ಖಾನೆಗಳು ಪ್ರತಿ ಟನ್ ಕಬ್ಬಿಗೆ ₹4,500 ದರ ಘೋಷಿಸಬೇಕು ಎಂದು ರೈತರು ಪಟ್ಟು ಹಿಡಿದಿದ್ದಾರೆ. ಕನಿಷ್ಠ ₹4,000 ದರವಾದರೂ ನಿಗದಿಪಡಿಸಬೇಕು ಎಂಬ ಒತ್ತಾಯವನ್ನೂ ಮುಂದಿಟ್ಟಿದ್ದಾರೆ. ಇಂದೇ ಕಬ್ಬಿನ ದರ ಘೋಷಣೆ ಮಾಡಬೇಕು ಎಂದು ಡೆಡ್‌ಲೈನ್ ನೀಡಿದ್ದಾರೆ.

Must Read