November 1, 2026
Sunday, November 1, 2026
spot_img

ಮಹಾದೇವ್ ಬೆಟ್ಟಿಂಗ್ ಜಾಲದ ಕಿಂಗ್‌ಪಿನ್ ಸೌರಭ್ ಚಂದ್ರಕರ್ ಒಮಾನ್‌ನಿಂದ ಗಡಿಪಾರು: CBI ವಶಕ್ಕೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಮಹಾದೇವ್ ಆನ್‌ಲೈನ್ ಬುಕ್ ಆ್ಯಪ್‌ನ ಪ್ರವರ್ತಕ ಹಾಗೂ ಅಕ್ರಮ ಬೆಟ್ಟಿಂಗ್ ಜಾಲದ ಪ್ರಮುಖ ಆರೋಪಿ ಸೌರಭ್ ಚಂದ್ರಕರ್ ಅವರನ್ನು ಒಮಾನ್‌ನಿಂದ ಭಾರತಕ್ಕೆ ಗಡಿಪಾರು ಮಾಡಲಾಗಿದೆ.

ಮಸ್ಕತ್‌ಗೆ ತೆರಳಿದ್ದ ವಿಶೇಷ ಸಿಬಿಐ ತಂಡ, ಚಂದ್ರಕರ್ ಅವರನ್ನು ಭಾರತಕ್ಕೆ ಕರೆತಂದಿದ್ದು, ಸೋಮವಾರ ರಾಯಪುರದ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ.

ಚಂದ್ರಕರ್ ವಿರುದ್ಧ ಸಿಬಿಐ ದಾಖಲಿಸಿರುವ ಎರಡು ಪ್ರಕರಣಗಳಲ್ಲಿ ಈಗಾಗಲೇ ಆರೋಪಪಟ್ಟಿ ಸಲ್ಲಿಸಲಾಗಿದೆ. ಜಾರಿ ನಿರ್ದೇಶನಾಲಯ (ED) ದಾಖಲಿಸಿರುವ ಮತ್ತೊಂದು ಪ್ರಕರಣದಲ್ಲಿಯೂ ಪ್ರಾಸಿಕ್ಯೂಷನ್ ದೂರು ಸಲ್ಲಿಸಲಾಗಿದೆ. ಭಾರತಕ್ಕೆ ಕರೆತಂದ ಬಳಿಕ ಚಂದ್ರಕರ್ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ಟ್ರಾನ್ಸಿಟ್ ರಿಮಾಂಡ್ ಪಡೆದ ನಂತರ ರಾಯಪುರಕ್ಕೆ ಕರೆದೊಯ್ಯಲಾಗುವುದು.

ದೇಶದಾದ್ಯಂತ ಹರಡಿದ್ದ ಬೆಟ್ಟಿಂಗ್ ಜಾಲ

ಸಿಬಿಐ ತನಿಖೆಯ ಪ್ರಕಾರ, ಮಹಾದೇವ್ ಆನ್‌ಲೈನ್ ಬುಕ್ ಆ್ಯಪ್ ದೇಶದ ದೊಡ್ಡ ಅಕ್ರಮ ಆನ್‌ಲೈನ್ ಬೆಟ್ಟಿಂಗ್ ಜಾಲಗಳಲ್ಲಿ ಒಂದಾಗಿದ್ದು, ವಿದೇಶದಿಂದ ಕಾರ್ಯನಿರ್ವಹಿಸುತ್ತಿತ್ತು ಎನ್ನಲಾಗಿದೆ. ಕ್ರಿಕೆಟ್, ಫುಟ್‌ಬಾಲ್, ಇಸ್ಪೀಟ್ ಸೇರಿದಂತೆ ವಿವಿಧ ಆಟಗಳ ಮೇಲೆ ಬೆಟ್ಟಿಂಗ್ ನಡೆಸಲು ದೇಶದಾದ್ಯಂತ ಫ್ರಾಂಚೈಸಿ ಪ್ಯಾನೆಲ್‌ಗಳು ಮತ್ತು ಶಾಖೆಗಳ ವ್ಯವಸ್ಥೆ ರೂಪಿಸಲಾಗಿತ್ತು. ಈ ಜಾಲದ ಮೂಲಕ ಬಳಕೆದಾರರನ್ನು ಸೇರಿಸಿಕೊಂಡು ಹಣ ಸಂಗ್ರಹಿಸಲಾಗುತ್ತಿತ್ತು ಎಂದು ತನಿಖಾ ಸಂಸ್ಥೆ ತಿಳಿಸಿದೆ.

ಇದನ್ನೂ ಓದಿ:

ಹಣ ವರ್ಗಾವಣೆ, ಹವಾಲಾ ಜಾಲದ ಆರೋಪ

ಬೆಟ್ಟಿಂಗ್‌ನಿಂದ ಬಂದ ಹಣವನ್ನು ಹಲವು ಮ್ಯೂಲ್ ಬ್ಯಾಂಕ್ ಖಾತೆಗಳ ಮೂಲಕ ವರ್ಗಾಯಿಸಿ, ಅನೇಕ ವಹಿವಾಟುಗಳ ಮೂಲಕ ಮೂಲವನ್ನು ಮರೆಮಾಚಲಾಗುತ್ತಿತ್ತು. ಬಳಿಕ ಹವಾಲಾ ಮಾರ್ಗದ ಮೂಲಕ ವಿದೇಶಗಳಿಗೆ ಹಣ ಸಾಗಿಸಲಾಗುತ್ತಿತ್ತು ಎಂಬುದು ಸಿಬಿಐ ಆರೋಪ. ಜಾಲದ ಕಾರ್ಯಾಚರಣೆಗೆ ಅಡ್ಡಿಯಾಗದಂತೆ ಕೆಲವು ಸಾರ್ವಜನಿಕ ಸೇವಕರಿಗೆ ಹಣ ನೀಡಲಾಗಿದೆ ಎಂಬ ಆರೋಪವೂ ತನಿಖೆಯಲ್ಲಿ ಉಲ್ಲೇಖವಾಗಿದೆ.

Must Read

Skip to toolbar