November 2, 2026
Monday, November 2, 2026
spot_img

ಡೊನಾಲ್ಡ್‌ ಟ್ರಂಪ್‌ ಮನೆಯ ಸಮೀಪವೇ ಖಾಸಗಿ ವಿಮಾನ ಪತನ : ಒಂಬತ್ತು ಮಂದಿ ದುರ್ಮ*ರಣ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಿವಾಸದ ಸಮೀಪವೇ ಖಾಸಗಿ ವಿಮಾನವೊಂದು ಪತನವಾಗಿದ್ದು, ಒಂಬತ್ತು ಮಂದಿ ಮೃತಪಟ್ಟಿದ್ದಾರೆ.

ಟ್ರಂಪ್‌ ಅವರ ಮಾರ್‌-ಎ-ಲಾಗೋ ರೆಸಾರ್ಟ್‌ನಿಂದ ಕೆಲವೇ ಮೈಲುಗಳ ದೂರದಲ್ಲಿ ವಿಮಾನ ಪತನವಾಗಿದೆ. ಟೆಕ್ಸಾಸ್‌ನ ಆಸ್ಟಿನ್‌ ಬರ್ಗ್‌ಸ್ಟೋರ್ಮ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಹಾಮಾಸ್‌ಗೆ ತೆರಳುತ್ತಿದ್ದ ಲಿಯರ್‌ಜೆಟ್‌ ಹೆಸರಿನ ವಿಮಾನ ಪಾಮ್‌ ಬೀಚ್‌ ಕೌಂಟಿಯ ಗ್ರೀನ್‌ ಏಕರ್ಸ್‌ ಬಳಿ ಕೆಳಮುಖವಾಗಿ ವೇಗವಾಗಿ ಧರೆಗೆ ಅಪ್ಪಳಿಸಿದೆ.

ಡೊನಾಲ್ಡ್ ಟ್ರಂಪ್ ಅವರ ಮಾರ್-ಎ-ಲಾಗೋ ರೆಸಾರ್ಟ್‌ನಿಂದ ಕೇವಲ 11 ಕಿಲೋಮೀಟರ್ ದೂರದಲ್ಲಿರುವ ಪಾಮ್ ಬೀಚ್ ಕೌಂಟಿಯ ಕ್ರೆಸ್ಟ್‌ಹ್ಯಾವನ್ ವಸತಿ ಪ್ರದೇಶದ ಬಳಿ ಈ ಭೀಕರ ವಿಮಾನ ಅಪಘಾತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ರಸ್ತೆಯ ಪಕ್ಕವೇ ವಿಮಾನ ಸ್ಫೋಟಗೊಂಡಿದ್ದು, ಬೆಂಕಿಯ ಉಂಡೆಉಂತೆ ಕಾಣಿಸಿದೆ. ವಿಮಾನ ಅಪ್ಪಳಿಸಿದ ಜಾಗದಲ್ಲಿ ಬೃಹತ್‌ ಕಂದಕ ಉಂಟಾಗಿದ್ದು, ಅಪಘಾತದ ತೀವ್ರತೆಯನ್ನು ಎತ್ತಿ ತೋರಿಸುತ್ತಿದೆ.

ಅಮೆರಿಕದ ಸಾರಿಗೆ ಕಾರ್ಯದರ್ಶಿ ಶಾನ್ ಡಫಿ ಅವರು ಈ ಘಟನೆಯನ್ನು ಭೀಕರ ದುರಂತ ಎಂದು ಕರೆದಿದ್ದು, ವಿಮಾನದಲ್ಲಿದ್ದ ಎಲ್ಲಾ 9 ಪ್ರಯಾಣಿಕರು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ. ಆದರೆ ನೆಲದ ಮೇಲಿದ್ದ ಯಾರಿಗೂ ಯಾವುದೇ ಪ್ರಾಣಾಪಾಯ ಅಥವಾ ಗಾಯಗಳಾಗಿಲ್ಲ ಎಂದು ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ ತಿಳಿಸಿದ್ದಾರೆ.

Must Read