ಹೊಸದಿಗಂತ ವರದಿ ಬೆಳಗಾವಿ:
ಕಬ್ಬಿಗೆ ಸೂಕ್ತ ಬೆಂಬಲ ಬೆಲೆ ನಿಗದಿಪಡಿಸಿ, ಸಕ್ಕರೆ ಕಾರ್ಖಾನೆಗಳನ್ನು ತಕ್ಷಣ ಆರಂಭಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿದರು.
ರೈತರ ಆಕ್ರೋಶದ ನಡುವೆ ಅವರ ಸಮಸ್ಯೆಗಳನ್ನು ಆಲಿಸಿದ ಸಚಿವರು, ಕಬ್ಬಿನ ದರ ನಿಗದಿ ಕುರಿತು ಮಂಗಳವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಎಲ್ಲ ರೈತ ಸಂಘಟನೆಗಳ ಮುಖಂಡರ ಸಭೆ ನಡೆಸಿ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು.
ಏಳು ತಿಂಗಳ ಹೋರಾಟಕ್ಕೂ ಪರಿಹಾರವಿಲ್ಲ: ರೈತರ ಆಕ್ರೋಶ
ಸಚಿವರ ನಿವಾಸದ ಮುಂದೆ ಜಮಾಯಿಸಿದ ರೈತರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಧರಣಿ ನಡೆಸಿದರು. ಈ ವೇಳೆ ಮಾತನಾಡಿದ ರೈತ ಸಂಘದ ರಾಜ್ಯಾಧ್ಯಕ್ಷ ಗಣೇಶ್ ಇಳಿಗೇರ, ಕಳೆದ ಏಳು ತಿಂಗಳಿಂದ ರೈತರು ನಿರಂತರ ಹೋರಾಟ ನಡೆಸುತ್ತಿದ್ದರೂ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮಸ್ಯೆ ಪರಿಹರಿಸಲು ಮುಂದಾಗಿಲ್ಲ ಎಂದು ಆರೋಪಿಸಿದರು.
ದೆಹಲಿಗೆ ತೆರಳಿ ಸಮಸ್ಯೆ ಹೇಳಿಕೊಂಡ ರೈತರಿಗೆ ಚಾಕೊಲೇಟ್ ನೀಡಿ ಕಳುಹಿಸಿರುವುದು ಸರ್ಕಾರಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ ಎಂದು ಅವರು ಟೀಕಿಸಿದರು. ಕಬ್ಬಿಗೆ ಸೂಕ್ತ ಬೆಲೆ ಸಿಗದೆ ರೈತರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಬೆಳೆ ನಷ್ಟದಿಂದ ಆತ್ಮಹತ್ಯೆಯ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಮುಖ್ಯಮಂತ್ರಿಗಳೊಂದಿಗೆ ನಾಲ್ಕು ಗಂಟೆಗಳ ಸಭೆ ನಡೆಸಿದರೂ ಪರಿಹಾರ ಸಿಕ್ಕಿಲ್ಲ. ಕೂಡಲೇ ಬೆಲೆ ಘೋಷಿಸದಿದ್ದರೆ ‘ಮಾಡು ಇಲ್ಲವೇ ಮಡಿ’ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಮಹಾರಾಷ್ಟ್ರ ಮಾದರಿಯಲ್ಲಿ ಬೆಲೆ ನಿಗದಿಗೆ ಒತ್ತಾಯ
ರೈತ ಸಂಘದ ಗೌರವಾಧ್ಯಕ್ಷ ರಾಘವೇಂದ್ರ ನಾಯಕ ಮಾತನಾಡಿ, ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳು ತಕ್ಷಣ ಕಾರ್ಯಾರಂಭ ಮಾಡಬೇಕು. ಕಾರ್ಖಾನೆ ಮಾಲೀಕರು, ಸಚಿವರು ಮತ್ತು ರೈತ ಮುಖಂಡರು ಸಭೆ ನಡೆಸಿ ಕಬ್ಬಿನ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿದರು. ಉಗಾರ, ನಿರಾಣಿ ಹಾಗೂ ಸೋಮಯ್ಯ ಸೇರಿದಂತೆ ಪ್ರಮುಖ ಕಾರ್ಖಾನೆಗಳ ಮಾಲೀಕರು ಒಗ್ಗೂಡಿ ನಿರ್ಧಾರ ಕೈಗೊಂಡು, ಪ್ರತಿವರ್ಷ ಬೆಲೆ ವಿಚಾರವಾಗಿ ಉಂಟಾಗುವ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದರು.
ನಾಳೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ
ರೈತರ ಅಹವಾಲು ಆಲಿಸಿದ ಸಚಿವ ಸತೀಶ್ ಜಾರಕಿಹೊಳಿ, ಕಬ್ಬಿನ ದರ ನಿಗದಿ ಕುರಿತು ಈ ಹಿಂದೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಂಡಿದ್ದರೂ ಕೆಲವು ಸಮಸ್ಯೆಗಳು ಉಳಿದಿವೆ ಎಂದು ತಿಳಿಸಿದರು. ರೈತರ ಆತಂಕವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಮಂಗಳವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎಲ್ಲ ರೈತ ಸಂಘಟನೆಗಳ ಮುಖಂಡರ ಸಭೆ ನಡೆಸಲಾಗುವುದು. ರೈತರ ಬೇಡಿಕೆಗಳು ಮತ್ತು ದರ ನಿಗದಿ ಸಮಸ್ಯೆ ಕುರಿತು ಸಮಗ್ರ ಚರ್ಚೆ ನಡೆಸಿ, ಅನುಕೂಲಕರ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.



