November 2, 2026
Monday, November 2, 2026
spot_img

ಪಿಂಕ್ ಲೈನ್ ಉದ್ಘಾಟನೆಗೆ ಹೊಸ ದಿನಾಂಕ ಫಿಕ್ಸ್: ನವೆಂಬರ್ 13ರಿಂದ ಮೆಟ್ರೋ ಸಂಚಾರ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬಹುದಿನಗಳಿಂದ ಕಾಯುತ್ತಿದ್ದ ನಮ್ಮ ಮೆಟ್ರೋದ ಪಿಂಕ್ ಲೈನ್ ಮೊದಲ ಹಂತದ ಉದ್ಘಾಟನೆಗೆ ದಿನಾಂಕ ನಿಗದಿಯಾಗಿದೆ. ನವೆಂಬರ್ 13ರಂದು ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗಿನ ಎಲಿವೇಟೆಡ್ ಮಾರ್ಗ ಸಾರ್ವಜನಿಕ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ. ಈ ಮೂಲಕ ಬೆಂಗಳೂರಿನ ಮೆಟ್ರೋ ಜಾಲಕ್ಕೆ ಮತ್ತೊಂದು ಪ್ರಮುಖ ಮಾರ್ಗ ಸೇರ್ಪಡೆಯಾಗಲಿದೆ.

ನಿಗದಿತ ದಿನಕ್ಕಿಂತ ಎರಡು ದಿನ ಮುಂಚಿತವಾಗಿ ಉದ್ಘಾಟನೆ

ಈ ಹಿಂದೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಹ್ವಾನ ನೀಡಿ, ನವೆಂಬರ್ 15ರಂದು ಪಿಂಕ್ ಲೈನ್ ಮಾರ್ಗವನ್ನು ಲೋಕಾರ್ಪಣೆಗೊಳಿಸುವ ಸಾಧ್ಯತೆಯಿದೆ ಎಂದು ತಿಳಿಸಿದ್ದರು. ಆದರೆ ಪ್ರಧಾನಿಯವರ ಕರ್ನಾಟಕ ಪ್ರವಾಸದ ವೇಳಾಪಟ್ಟಿಗೆ ಅನುಗುಣವಾಗಿ ಉದ್ಘಾಟನೆಯ ದಿನಾಂಕವನ್ನು ಎರಡು ದಿನ ಮುಂಚಿತವಾಗಿ ನಿಗದಿಪಡಿಸಲಾಗಿದೆ.

ಸಂಸದ ತೇಜಸ್ವಿ ಸೂರ್ಯ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ “November 13th. #PinkLine” ಎಂದು ಪೋಸ್ಟ್ ಮಾಡುವ ಮೂಲಕ ದಿನಾಂಕವನ್ನು ಪ್ರಕಟಿಸಿದ್ದಾರೆ. ಪಿಂಕ್ ಲೈನ್ ಆರಂಭದ ಸುದ್ದಿ ಮೆಟ್ರೋ ಪ್ರಯಾಣಿಕರಲ್ಲಿ ನಿರೀಕ್ಷೆ ಹೆಚ್ಚಿಸಿದೆ.

ಮೊದಲ ಹಂತದಲ್ಲಿ ಆರು ನಿಲ್ದಾಣಗಳು

ಪಿಂಕ್ ಲೈನ್‌ನ ಮೊದಲ ಹಂತದಲ್ಲಿ ಕಾಳೇನ ಅಗ್ರಹಾರದಿಂದ ತಾವರೆಕೆರೆವರೆಗೆ ಒಟ್ಟು 7.5 ಕಿಲೋಮೀಟರ್ ಉದ್ದದ ಎಲಿವೇಟೆಡ್ ಮಾರ್ಗ ಕಾರ್ಯಾರಂಭ ಮಾಡಲಿದೆ. ಈ ಮಾರ್ಗದಲ್ಲಿ ಕಾಳೇನ ಅಗ್ರಹಾರ, ಹುಳಿಮಾವು, ಐಐಎಂ-ಬಿ, ಜೆ.ಪಿ. ನಗರ 4ನೇ ಹಂತ, ಜಯದೇವ ಆಸ್ಪತ್ರೆ ಮತ್ತು ತಾವರೆಕೆರೆ ಸೇರಿದಂತೆ ಆರು ನಿಲ್ದಾಣಗಳು ಪ್ರಯಾಣಿಕರ ಸೇವೆಗೆ ಲಭ್ಯವಾಗಲಿವೆ.

ಈ ಮಾರ್ಗ ಆರಂಭವಾದ ಬಳಿಕ ನಮ್ಮ ಮೆಟ್ರೋದ ಒಟ್ಟು ಕಾರ್ಯಾಚರಣೆಯ ಜಾಲವು 96.10 ಕಿಲೋಮೀಟರ್‌ನಿಂದ 103.60 ಕಿಲೋಮೀಟರ್‌ಗೆ ವಿಸ್ತರಣೆಯಾಗಲಿದೆ.

ಉಳಿದ ಸುರಂಗ ಮಾರ್ಗಕ್ಕೆ ಇನ್ನಷ್ಟು ಕಾಯಬೇಕು

ಪಿಂಕ್ ಲೈನ್‌ನ ಒಟ್ಟು ಉದ್ದ 21.3 ಕಿಲೋಮೀಟರ್ ಆಗಿದ್ದು, ಡೈರಿ ಸರ್ಕಲ್‌ನಿಂದ ನಾಗವಾರದವರೆಗಿನ 13.8 ಕಿಲೋಮೀಟರ್ ಸುರಂಗ ಮಾರ್ಗದ ಕಾಮಗಾರಿ ಇನ್ನೂ ಪ್ರಗತಿಯಲ್ಲಿದೆ.

Must Read

Skip to toolbar