November 2, 2026
Monday, November 2, 2026
spot_img

ಕುಂಬಳೆ ಕಲೋತ್ಸವ; ಕಲೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ದಾರಿ: ಶಾಸಕ ಕೆ. ನೀಲಕಂಠನ್

ಹೊಸದಿಗಂತ ವರದಿ ಬದಿಯಡ್ಕ:

ವಿದ್ಯಾರ್ಥಿಗಳ ಸೃಜನಶೀಲ ಪ್ರತಿಭೆ, ಕಲಾ ವೈವಿಧ್ಯ ಮತ್ತು ಸಾಂಸ್ಕೃತಿಕ ಉತ್ಸಾಹಕ್ಕೆ ವೇದಿಕೆಯಾದ ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವವು ಪೆರಡಾಲ ನವಜೀವನ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವರ್ಣರಂಜಿತವಾಗಿ ಆರಂಭಗೊಂಡಿದೆ.

ಉದುಮ ಕ್ಷೇತ್ರದ ಶಾಸಕ ಕೆ. ನೀಲಕಂಠನ್ ದೀಪ ಬೆಳಗಿಸುವ ಮೂಲಕ ಕಲೋತ್ಸವವನ್ನು ಉದ್ಘಾಟಿಸಿದರು. ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸಕ್ಕೆ ಅತ್ಯವಶ್ಯಕ ಎಂದು ಅವರು ಅಭಿಪ್ರಾಯಪಟ್ಟರು.

ಅಂಕಗಳಿಕೆಯ ಜೊತೆಗೆ ಕಲೆಯೂ ಮುಖ್ಯ

ವಿದ್ಯಾರ್ಥಿಗಳಲ್ಲಿ ಅಡಗಿರುವ ಸೃಜನಶೀಲ ಪ್ರತಿಭೆಗಳನ್ನು ಹೊರಹಾಕಲು ಶಾಲಾ ಕಲೋತ್ಸವಗಳು ಉತ್ತಮ ವೇದಿಕೆಯಾಗಿವೆ. ಕೇವಲ ಅಂಕಗಳಿಕೆಯ ಶಿಕ್ಷಣಕ್ಕೆ ಸೀಮಿತವಾಗದೆ, ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು ಎಂದು ಶಾಸಕ ಕೆ. ನೀಲಕಂಠನ್ ಹೇಳಿದರು.

ಕಾಸರಗೋಡಿನ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹಾಗೂ ಸ್ಥಳೀಯ ಕಲಾಪ್ರಕಾರಗಳನ್ನು ಉಳಿಸಿ ಬೆಳೆಸುವಲ್ಲಿ ಯುವಪೀಳಿಗೆಯ ಪಾತ್ರ ಮಹತ್ವದ್ದಾಗಿದೆ. ಸ್ಪರ್ಧೆಗಳಲ್ಲಿ ಸೋಲು-ಗೆಲುವಿಗಿಂತ ಭಾಗವಹಿಸುವಿಕೆ, ಸೌಹಾರ್ದತೆ ಮತ್ತು ಸ್ಪರ್ಧಾತ್ಮಕ ಮನೋಭಾವ ಮುಖ್ಯ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

94 ಶಾಲೆಗಳ 1,800 ವಿದ್ಯಾರ್ಥಿಗಳ ಕಲಾ ಪ್ರದರ್ಶನ

ಕುಂಬಳೆ ಉಪಜಿಲ್ಲೆಯ 94 ಶಾಲೆಗಳಿಂದ ಸುಮಾರು 1,800 ವಿದ್ಯಾರ್ಥಿಗಳು ಮೊದಲ ದಿನ 13 ವೇದಿಕೆಗಳಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು. ಅಕ್ಟೋಬರ್ 26 ಮತ್ತು 27ರಂದು ವೇದಿಕೆಯೇತರ ಸ್ಪರ್ಧೆಗಳು ನಡೆದಿದ್ದು, ನವೆಂಬರ್ 2, 3 ಮತ್ತು 4ರಂದು ವೇದಿಕೆ ಸ್ಪರ್ಧೆಗಳು ನಡೆಯುತ್ತಿವೆ. ವಿದ್ಯಾರ್ಥಿಗಳ ಕಲಾ ಪ್ರದರ್ಶನದಿಂದ ಶಾಲಾ ಆವರಣದಾದ್ಯಂತ ಸಂಭ್ರಮದ ವಾತಾವರಣ ನಿರ್ಮಾಣವಾಗಿದೆ.

ಮಕ್ಕಳ ಉತ್ಸಾಹ ಮತ್ತು ಕಲಾ ಪ್ರದರ್ಶನದ ನಡುವೆ ತುಂತುರು ಮಳೆಯೂ ಕಲೋತ್ಸವದ ಸಂಭ್ರಮವನ್ನು ಹೆಚ್ಚಿಸಿತು.

ಇದನ್ನೂ ಓದಿ:

ರುಚಿಕರ ಮಧ್ಯಾಹ್ನ ಭೋಜನ ವ್ಯವಸ್ಥೆ:

ಕಾರ್ಯಕ್ರಮಕ್ಕೆ ಆಗಮಿಸಿದ ನೂರಾರು ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಕಲಾಪ್ರೇಮಿಗಳ ಅನುಕೂಲಕ್ಕಾಗಿ ಸ್ಥಳದಲ್ಲೇ ಅಚ್ಚುಕಟ್ಟಾದ ಮಧ್ಯಾಹ್ನ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಊಟದಲ್ಲಿ ಬಿಸಿಬಿಸಿ ಅನ್ನ, ರುಚಿಕರವಾದ ಪಲ್ಯ, ಸಾಂಬಾರು, ಸಾರು, ಜತೆಗೆ ಉಪ್ಪಿನಕಾಯಿ ಹಾಗೂ ಎಲ್ಲರ ಮೆಚ್ಚುಗೆಗೆ ಪಾತ್ರವಾದ ಸಿಹಿ ಪಾಯಸವನ್ನು ಬಡಿಸಲಾಯಿತು. ಸಜ್ಜಿಗೆ ಅವಲಕ್ಕಿಯನ್ನು ಉಪಹಾರವಾಗಿ ನೀಡಲಾಯಿತು.

ಗಣ್ಯರ ಉಪಸ್ಥಿತಿ, ಸಂಘಟಕರ ಸಿದ್ಧತೆ

ಕಾಸರಗೋಡು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಪಂಚಾಯಿತಿಗಳ ಜನಪ್ರತಿನಿಧಿಗಳು, ಶಿಕ್ಷಣಾಧಿಕಾರಿಗಳು, ಶಿಕ್ಷಕರು, ಸಂಘಟಕ ಸಮಿತಿ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸುವುದರ ಜೊತೆಗೆ ಸ್ಥಳೀಯ ಕಲಾ ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದೊಂದಿಗೆ ಕುಂಬಳೆ ಉಪಜಿಲ್ಲಾ ಕಲೋತ್ಸವ ಮುನ್ನಡೆಯುತ್ತಿದೆ. ಮಳೆಯ ನಡುವೆಯೂ ವಿದ್ಯಾರ್ಥಿಗಳಿಗೆ ಯಾವುದೇ ಅಡಚಣೆಯಾಗದಂತೆ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಸಂಘಟಕ ಸಮಿತಿ ಅಧ್ಯಕ್ಷ ಶಂಕರ ಡಿ. ತಿಳಿಸಿದ್ದಾರೆ.

Must Read