Saturday, September 20, 2025

ಕ್ಯಾಲಿಫೋರ್ನಿಯಾ: ಪೊಲೀಸರ ಗುಂಡೇಟಿಗೆ ಭಾರತೀಯ ಟೆಕ್ಕಿ ಬಲಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಭಾರತೀಯ ಮೂಲದ ಎಂಜಿನಿಯರ್ ಒಬ್ಬರನ್ನು ಸ್ಥಳೀಯ ಪೊಲೀಸರು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸೆಪ್ಟೆಂಬರ್ 3 ರಂದು ಸಾಂತಾಕ್ಲಾರಾದಲ್ಲಿ ನಡೆದ ಈ ದುರಂತ ಘಟನೆಯಲ್ಲಿ 30 ವರ್ಷದ ಮೊಹಮ್ಮದ್ ನಿಜಾಮುದ್ದೀನ್ ಪ್ರಾಣ ಕಳೆದುಕೊಂಡಿದ್ದಾರೆ.

ಪೊಲೀಸರ ಪ್ರಕಾರ, ನಿಜಾಮುದ್ದೀನ್ ತನ್ನ ರೂಮ್‌ಮೇಟ್ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಆತನನ್ನು ನಿಯಂತ್ರಣಕ್ಕೆ ತರಲು ಪ್ರಯತ್ನಿಸಿದಾಗ, ಆತ ಮತ್ತೊಮ್ಮೆ ದಾಳಿ ಮಾಡಲು ಮುಂದಾಗಿದ್ದರಿಂದ ಗುಂಡು ಹಾರಿಸಲು ಹೊರತು ಬೇರೆ ಮಾರ್ಗ ಇರಲಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಘಟನಾ ಸ್ಥಳದಲ್ಲಿ ಎರಡು ಚಾಕುಗಳು ಪತ್ತೆಯಾದವು.

ತೆಲಂಗಾಣದ ಮಹಬೂಬ್‌ನಗರ ಮೂಲದ ನಿಜಾಮುದ್ದೀನ್ ಸ್ನಾತಕೋತ್ತರ ಪದವಿ ಪಡೆಯಲು ಅಮೆರಿಕದಲ್ಲಿ ವಾಸಿಸುತ್ತಿದ್ದರು. ಅವರ ತಂದೆ ಮೊಹಮ್ಮದ್ ಹಸ್ನುದ್ದೀನ್, ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದು ಮಗನ ಮೃತದೇಹವನ್ನು ಭಾರತಕ್ಕೆ ತರಿಸುವಂತೆ ಮನವಿ ಮಾಡಿದ್ದಾರೆ. ಜೊತೆಗೆ, ಈ ಹತ್ಯೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಸರ್ಕಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ನಿಜಾಮುದ್ದೀನ್ ಅವರ ಕುಟುಂಬವು ಈ ಘಟನೆಯಲ್ಲಿ ಜನಾಂಗೀಯ ತಾರತಮ್ಯದ ಅಂಶವಿರುವ ಸಾಧ್ಯತೆಯಿದೆ ಎಂದು ಶಂಕಿಸಿದೆ. ಅವರ ಸ್ನೇಹಿತನಿಂದಲೇ ಕೊಲೆ ಕುರಿತು ಮಾಹಿತಿ ದೊರೆತಿದೆ ಎಂದು ಕುಟುಂಬದವರು ಹೇಳಿದ್ದಾರೆ.

ಘಟನೆಯಲ್ಲಿ ಗಾಯಗೊಂಡಿದ್ದ ರೂಮ್‌ಮೇಟ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿಜಾಮುದ್ದೀನ್ ಅವರ ಮೃತದೇಹವು ಪ್ರಸ್ತುತ ಸಾಂತಾಕ್ಲಾರಾದ ಆಸ್ಪತ್ರೆಯಲ್ಲಿ ಇರಿಸಲಾಗಿದೆ.

ಇದನ್ನೂ ಓದಿ