ಮನೆಯಲ್ಲಿ ಪೂಜಾ ಕೋಣೆ ಎಂದರೆ ದೇವರ ಆರಾಧನೆಗಾಗಿ ನಿರ್ಮಿಸಿದ ಪವಿತ್ರ ಸ್ಥಳ. ಇದು ಧನಾತ್ಮಕ ಶಕ್ತಿಯನ್ನು ಆಕರ್ಷಿಸಿ, ಕುಟುಂಬಕ್ಕೆ ಶಾಂತಿ ಮತ್ತು ಸಮೃದ್ಧಿ ತರುತ್ತದೆ ಎಂಬ ನಂಬಿಕೆ ಇದೆ. ಆದರೆ ವಾಸ್ತು ನಿಯಮಗಳಿಗೆ ಅನುಗುಣವಾಗಿ ಪೂಜಾ ಕೋಣೆ ನಿರ್ಮಾಣವಾಗದಿದ್ದರೆ, ಮನೆಗೆ ನಕಾರಾತ್ಮಕ ಪರಿಣಾಮಗಳು ಬೀರುವ ಸಾಧ್ಯತೆ ಇದೆ ಎಂದು ವಾಸ್ತು ತಜ್ಞರು ಎಚ್ಚರಿಕೆ ನೀಡುತ್ತಿದ್ದಾರೆ.
ಪೂಜಾ ಕೋಣೆ ಯಾವ ದಿಕ್ಕಿನಲ್ಲಿ ಇರಬೇಕು?
ವಾಸ್ತು ಪ್ರಕಾರ, ಪೂಜಾ ಕೋಣೆ ಇಡುವ ಅತ್ಯುತ್ತಮ ಸ್ಥಳ ಈಶಾನ್ಯ ಮೂಲೆ. ಇದು ಸಾಧ್ಯವಾಗದಿದ್ದರೆ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಇಡಬಹುದು. ಆದರೆ ದಕ್ಷಿಣ ದಿಕ್ಕಿನಲ್ಲಿ ಪೂಜಾ ಕೋಣೆ ಇರಬಾರದು. ಇದು ಮನೆಯೊಳಗೆ ಅಶಾಂತಿ ಮತ್ತು ಅಡೆತಡೆಗಳನ್ನು ತರುತ್ತದೆ ಎಂದು ನಂಬಲಾಗಿದೆ.
ದೇವರ ಮೂರ್ತಿಗಳ ವ್ಯವಸ್ಥೆ ಹೇಗೆ ಮಾಡಬೇಕು?
ಪೂಜಾ ಕೋಣೆಯಲ್ಲಿರುವ ವಿಗ್ರಹಗಳು ಪೂರ್ವ ಅಥವಾ ಪಶ್ಚಿಮಕ್ಕೆ ಮುಖ ಮಾಡಿರಬೇಕು. ವಿಗ್ರಹಗಳನ್ನು ಗೋಡೆಯಿಂದ ಸ್ವಲ್ಪ ದೂರದಲ್ಲಿ ಇಡುವುದು ಸೂಕ್ತ. ಎರಡು ಪ್ರತಿಮೆಗಳು ಪರಸ್ಪರ ಎದುರಾಗುವಂತಿಲ್ಲ. ಹೀಗೆ ಮಾಡಿದರೆ ಶಕ್ತಿಯ ಪ್ರವಾಹ ಸರಿಯಾಗಿ ಹರಿಯುತ್ತದೆ.
ಪೂಜಾ ಕೋಣೆಯ ಬಣ್ಣ ಯಾವುದು ಉತ್ತಮ?
ಪೂಜಾ ಕೋಣೆಗೆ ಕಪ್ಪು ಮತ್ತು ಕಡು ನೀಲಿ ಬಣ್ಣಗಳನ್ನು ಬಳಸಬಾರದು. ಬಿಳಿ, ತಿಳಿ ಹಳದಿ ಮತ್ತು ಕೆನೆ ಬಣ್ಣಗಳು ಶಾಂತಿ ಮತ್ತು ಸಂತೋಷವನ್ನು ತರುತ್ತವೆ. ಬೆಳಕು ತುಂಬಿರುವ ಕೋಣೆ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಪೂಜಾ ಸಾಮಗ್ರಿಗಳ ಜೋಡಣೆ
ಧೂಪ, ದೀಪ, ಎಣ್ಣೆ ಮತ್ತು ಧಾರ್ಮಿಕ ಪುಸ್ತಕಗಳನ್ನು ಪಶ್ಚಿಮ ಗೋಡೆಯ ಕಡೆ ಇಡುವುದು ಉತ್ತಮ. ವಿಗ್ರಹಗಳ ಮೇಲೆ ಯಾವುದೇ ವಸ್ತು ಇಡಬಾರದು. ಮುರಿದ ವಿಗ್ರಹಗಳು ಅಥವಾ ಧೂಳು ತುಂಬಿರುವ ಸಾಮಗ್ರಿಗಳನ್ನು ಇಡುವುದರಿಂದ ದುರಾದೃಷ್ಟ ಬರುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.