ಹೊಸದಿಗಂತ ವರದಿ ಮಡಿಕೇರಿ:
ರಾಜ್ಯ ಸರಕಾರ ಕೆಎಸ್ಆರ್ಟಿಸಿ ಬಸ್ ದರ ಏರಿಸಿರುವ ಬೆನ್ನಲ್ಲೇ ಕೊಡಗು ಜಿಲ್ಲೆಯಲ್ಲಿ ಖಾಸಗಿ ಬಸ್’ಗಳ ಪ್ರಯಾಣ ದರವನ್ನು ಹೆಚ್ಚಿಸಲು ಕೊಡಗು ಬಸ್ ಮಾಲಕರ ಸಂಘ ನಿರ್ಧರಿಸಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘದ ಅಧ್ಯಕ್ಷ ಜನಾರ್ಧನ ಪ್ರಭು ಅವರು, ಕಳೆದ 8 ವರ್ಷಗಳಿಂದ ಸ್ಥಿರವಾಗಿದ್ದ ಕೊಡಗು ಜಿಲ್ಲೆಯ ಖಾಸಗಿ ಬಸ್ ಪ್ರಯಾಣ ದರವನ್ನು ನ.11ರಿಂದ ಶೇ.15ರಿಂದ 20ರಷ್ಟು ಹೆಚ್ಚಿಸಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ.
ಡೀಸೆಲ್, ಬಿಡಿಭಾಗ, ವಿಮೆ, ತೆರಿಗೆ ಮತ್ತು ಸಿಬ್ಬಂದಿ ವೇತನ ಏರಿಕೆಯಿಂದ ನಿರ್ವಹಣಾ ವೆಚ್ಚ ಗಣನೀಯವಾಗಿ ಹೆಚ್ಚಾಗಿದೆ. ಕೆಎಸ್ಆರ್ಟಿಸಿ ಈಗಾಗಲೇ ಶೇ. 23ರಷ್ಟು ದರ ಹೆಚ್ಚಿಸಿದೆ. ಈ ಹಿನ್ನೆಲೆಯಲ್ಲಿ ದರ ಏರಿಕೆ ಅನಿವಾರ್ಯವಾಗಿದೆ ಎಂದು ಅವರು ವಿವರಿಸಿದರು.
ಕೋವಿಡ್ಗೂ ಮೊದಲು ಜಿಲ್ಲೆಯಲ್ಲಿ 160ಕ್ಕೂ ಹೆಚ್ಚು ಖಾಸಗಿ ಬಸ್ಗಳು ಓಡಾಡುತ್ತಿದ್ದವು. ನಂತರ 50 ಬಸ್ಗಳು ಸಂಚಾರ ಸ್ಥಗಿತಗೊಳಿಸಿವೆ. ಈಗ ಕೇವಲ 110 ಬಸ್ಗಳು ಮಾತ್ರ ಸಂಚರಿಸುತ್ತಿವೆ ಎಂದು ತಿಳಿಸಿದರು.
ಈ ವೇಳೆ ಸಂಘದ ಉಪಾಧ್ಯಕ್ಷ ಪೂಣಚ್ಚ, ಪ್ರಮುಖರಾದ ಜಯಂತ್, ಸುಬ್ರಮಣ್ಯ, ಉಮೇಶ್, ದಿಲನ್ ಚಂಗಪ್ಪ ಉಪಸ್ಥಿತರಿದ್ದರು



