November 8, 2026
Sunday, November 8, 2026
spot_img

ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ಥಿರತೆ, ಹೈನುಗಾರ ರೈತರ ಹಿತದೃಷ್ಟಿಯಿಂದ ದರ ಪರಿಷ್ಕರಣೆ ಅಗತ್ಯ: ಸುರೇಖಾ ಚಂದ್ರಹಾಸ್

ಹೊಸದಿಗಂತ ವರದಿ ಉಳ್ಳಾಲ:

ಸಾರಿಗೆ ಸಂಸ್ಥೆಗಳ ಆರ್ಥಿಕ ಸ್ಥಿರತೆ, ನೌಕರರ ಉದ್ಯೋಗ ಭದ್ರತೆ ಹಾಗೂ ಹೈನುಗಾರ ರೈತರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಬಸ್ ಪ್ರಯಾಣ ದರ ಮತ್ತು ಹಾಲಿನ ದರ ಪರಿಷ್ಕರಣೆಯ ನಿರ್ಧಾರ ಕೈಗೊಂಡಿದೆ ಎಂದು ಗ್ಯಾರಂಟಿ ಅನುಷ್ಠಾನ ಸಮಿತಿಯ ಜಿಲ್ಲಾ ಉಪಾಧ್ಯಕ್ಷೆ ಸುರೇಖಾ ಚಂದ್ರಹಾಸ್ ಹೇಳಿದರು.

ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್‌ನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡೀಸೆಲ್, ಪೆಟ್ರೋಲ್, ಬಸ್ ನಿರ್ವಹಣೆ ಹಾಗೂ ಬಿಡಿಭಾಗಗಳ ಬೆಲೆ ಏರಿಕೆಯಿಂದ ಸಾರಿಗೆ ಸಂಸ್ಥೆಗಳ ಮೇಲಿನ ಆರ್ಥಿಕ ಹೊರೆ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಗುಣಮಟ್ಟದ ಸೇವೆ ಮುಂದುವರಿಸಲು ದರ ಪರಿಷ್ಕರಣೆ ಅನಿವಾರ್ಯವಾಗಿದೆ ಎಂದರು.

ರಾಜ್ಯದ ನಾಲ್ಕು ರಸ್ತೆ ಸಾರಿಗೆ ಸಂಸ್ಥೆಗಳು ಪ್ರತಿದಿನ ಲಕ್ಷಾಂತರ ಜನರಿಗೆ ಸೇವೆ ನೀಡುತ್ತಿವೆ. ಸಂಸ್ಥೆಗಳು ನಿರಂತರ ನಷ್ಟ ಅನುಭವಿಸಿದರೆ ಪ್ರಯಾಣಿಕರಿಗೆ ಉತ್ತಮ ಸೇವೆ ಒದಗಿಸುವುದು ಕಷ್ಟವಾಗಲಿದೆ. ಸಾರಿಗೆ ಸಂಸ್ಥೆಗಳನ್ನು ಉಳಿಸುವುದರಿಂದ ಸಾವಿರಾರು ನೌಕರರ ಉದ್ಯೋಗ ಭದ್ರತೆಯೂ ಕಾಪಾಡಿದಂತಾಗುತ್ತದೆ ಎಂದು ತಿಳಿಸಿದರು.

ಶಕ್ತಿ ಯೋಜನೆಯಿಂದ ಸಾರಿಗೆ ಸಂಸ್ಥೆಗಳಿಗೆ ನಷ್ಟವಾಗುತ್ತಿದೆ ಎಂಬ ಆರೋಪವನ್ನು ತಳ್ಳಿಹಾಕಿದ ಅವರು, ಯೋಜನೆಯ ವೆಚ್ಚವನ್ನು ಸರ್ಕಾರವೇ ಸಂಸ್ಥೆಗಳಿಗೆ ಭರಿಸುತ್ತಿದೆ. ಹೀಗಾಗಿ ಮಹಿಳೆಯರಿಗೆ ಉಚಿತ ಪ್ರಯಾಣದ ಸೌಲಭ್ಯ ಮುಂದುವರಿಯುತ್ತಿದೆ ಎಂದರು.

ಹಾಲಿನ ದರ ಪರಿಷ್ಕರಣೆಯು ಹೈನುಗಾರ ರೈತರ ಹಿತದೃಷ್ಟಿಯಿಂದ ಕೈಗೊಂಡ ಕ್ರಮವಾಗಿದೆ. ಜಾನುವಾರುಗಳ ಮೇವು, ಆಹಾರ ಮತ್ತು ನಿರ್ವಹಣಾ ವೆಚ್ಚ ಹೆಚ್ಚಾಗಿರುವುದರಿಂದ ಹಾಲಿನ ಉತ್ಪಾದನೆಯನ್ನು ಉತ್ತೇಜಿಸಲು ರೈತರಿಗೆ ಪ್ರತಿ ಲೀಟರ್‌ಗೆ ಹೆಚ್ಚುವರಿ ಹಣ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಉಳ್ಳಾಲ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅಮಿತಾ ಅಶ್ವಿನ್ ಬಂಡಿಕೊಟ್ಯ ಮಾತನಾಡಿ, ಕರ್ನಾಟಕದಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಹಾಲಿನ ದರ ಕಡಿಮೆ ಇದೆ. ಪ್ರತಿಯೊಂದು ಬೆಲೆ ಏರಿಕೆಗೂ ಗ್ಯಾರಂಟಿ ಯೋಜನೆಗಳೇ ಕಾರಣ ಎನ್ನುವುದು ಸರಿಯಲ್ಲ. ಗೃಹಲಕ್ಷ್ಮಿ ಮತ್ತು ಶಕ್ತಿ ಯೋಜನೆಗಳು ಮಹಿಳೆಯರ ಕುಟುಂಬ ನಿರ್ವಹಣೆ ಹಾಗೂ ಪ್ರಯಾಣದ ವೆಚ್ಚಕ್ಕೆ ನೆರವಾಗುತ್ತಿವೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಸದಸ್ಯೆ ದೇವಕಿ ಉಳ್ಳಾಲ್, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಕ್ಲೇರ ಕುವೆಲ್ಲೊ ಹಾಗೂ ಕೋಟೆಕಾರು ಪಟ್ಟಣ ಪಂಚಾಯತ್ ನಾಮನಿರ್ದೇಶಿತ ಸದಸ್ಯೆ ಸಫಿಯ ಉಪಸ್ಥಿತರಿದ್ದರು.

Must Read

Skip to toolbar