ಹೊಸದಿಗಂತ ಡಿಜಿಟಲ್ ಡೆಸ್ಕ್:
“ಇನ್ಮುಂದೆ ಜಗಳ ಬೇಡ, ಒಟ್ಟಾಗಿ ಕೆಲಸ ಮಾಡೋಣ” ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರಿಗೆ ಮೇಕೆದಾಟು ಯೋಜನೆಗೆ ಸಹಕರಿಸುವಂತೆ ಸೌಹಾರ್ದಯುತ ಮನವಿ ಮಾಡಿದ್ದಾರೆ.
ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ದಶಕಗಳಿಂದ ನಡೆದುಕೊಂಡು ಬಂದಿರುವ ಜಟಾಪಟಿಗೆ ಪೂರ್ಣವಿರಾಮ ಇಡಲು ಬಯಸಿರುವ ಅವರು, “ಅಂತರರಾಜ್ಯ ನೀರಿನ ವಿವಾದಕ್ಕೆ ಸಂಬಂಧಿಸಿದಂತೆ ಹೋರಾಟ ಮಾಡುವ ದಿನಗಳು ಈಗ ಮುಗಿದಿವೆ” ಎಂದು ಒಗ್ಗಟ್ಟಿನ ಸಂದೇಶ ರವಾನಿಸಿದ್ದಾರೆ.
ನಾವು ಕಾನೂನು ಮೀರಲ್ಲ
“ನಮ್ಮ ದೇಶದ ಕಾನೂನು ತಮಿಳುನಾಡು ಮುಖ್ಯಮಂತ್ರಿಗಳಿಗೂ ಗೊತ್ತಿದೆ ಎಂದು ನಾನು ನಂಬುತ್ತೇನೆ. ಈ ಯೋಜನೆಗೆ ನಾವು ಯಾರ ಅನುಮತಿಯನ್ನೂ ಕೇಳಬೇಕಾಗಿಲ್ಲ. ಕರ್ನಾಟಕ ತನ್ನದೇ ಆದ ಜಾಗದಲ್ಲಿ ಅಣೆಕಟ್ಟು ನಿರ್ಮಿಸಿಕೊಳ್ಳಬಹುದು ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಸ್ಪಷ್ಟವಾಗಿ ಹೇಳಿದೆ. ಅದರೊಂದಿಗೆ ತಮಿಳುನಾಡಿಗೆ ವಾರ್ಷಿಕ 177 ಟಿಎಂಸಿ ನೀರು ಬಿಡಬೇಕು ಎಂಬ ಷರತ್ತನ್ನೂ ವಿಧಿಸಿದ್ದು, ಅದಕ್ಕೆ ನಾವು ಸಂಪೂರ್ಣ ಬದ್ಧರಾಗಿದ್ದೇವೆ” ಎಂದು ಡಿಕೆಶಿ ಸ್ಪಷ್ಟಪಡಿಸಿದ್ದಾರೆ.
ಇದು ತಮಿಳುನಾಡಿಗೂ ಲಾಭ ತರಲಿದೆ
ಮೇಕೆದಾಟು ಬರೀ ನಮಗಷ್ಟೇ ಅಲ್ಲ, ತಮಿಳುನಾಡಿಗೂ ಅತಿ ಹೆಚ್ಚು ಪ್ರಯೋಜನ ನೀಡಲಿದೆ. ಮಳೆ ಕೈಕೊಟ್ಟಾಗ ಅಥವಾ ನೀರಿನ ಅಭಾವ ತಲೆದೋರಿದಾಗ ಎರಡು ರಾಜ್ಯಗಳ ಸಂಕಷ್ಟ ನೀಗಿಸಲು ಇದು ‘ಬ್ಯಾಲೆನ್ಸಿಂಗ್ ಜಲಾಶಯ’ವಾಗಿ ಕೆಲಸ ಮಾಡಲಿದೆ ಎಂದು ವಿವರಿಸಿದ್ದಾರೆ.
“ನಾವು ಕೊಟ್ಟ ಮಾತಿಗೆ ತಕ್ಕಂತೆ ನಡೆದುಕೊಳ್ಳುತ್ತೇವೆ, ಸಂಗ್ರಹವಾಗುವ ನೀರನ್ನು ಯಾವುದೇ ಕಾರಣಕ್ಕೂ ದುರ್ಬಳಕೆ ಮಾಡಿಕೊಳ್ಳುವುದಿಲ್ಲ. ತಮಿಳುನಾಡು ಸಿಎಂ ಅವರು ಬೇಕಿದ್ದರೆ ತಮ್ಮದೊಂದು ತಜ್ಞರ ತಂಡವನ್ನು ಇಲ್ಲಿಗೆ ಕಳುಹಿಸಿ ಪರಿಶೀಲಿಸಲಿ” ಎಂದು ಮುಕ್ತ ಆಹ್ವಾನ ನೀಡಿದ್ದಾರೆ.
ಪರಿಸರ ಕಾಳಜಿಗೂ ಆದ್ಯತೆ
ಯೋಜನೆಗಾಗಿ ಮುಳುಗಡೆಯಾಗುವ ಅರಣ್ಯ ಪ್ರದೇಶಕ್ಕೆ ಪರ್ಯಾಯವಾಗಿ, ಬೇರೆಡೆ ಸುಮಾರು 5,400 ಹೆಕ್ಟೇರ್ ಅರಣ್ಯ ಭೂಮಿಯನ್ನು ಗುರುತಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸುವ ಪ್ರಕ್ರಿಯೆ ಈಗಾಗಲೇ ಚಾಲ್ತಿಯಲ್ಲಿದೆ. ಈ ಕೆಲಸ ಮುಗಿದ ತಕ್ಷಣ ಜಲ ಆಯೋಗಕ್ಕೆ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಮೇಕೆದಾಟು ವಿಚಾರದಲ್ಲಿ ರಾಜ್ಯದ ಹಿತದೃಷ್ಟಿಯಿಂದ ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಎನ್ಡಿಎ ಮೈತ್ರಿಕೂಟದ ನಾಯಕರು ಕೂಡ ಸರ್ಕಾರಕ್ಕೆ ಬೆಂಬಲ ನೀಡಲು ಒಪ್ಪಿಕೊಂಡಿದ್ದಾರೆ ಎಂದು ಸಿಎಂ ಹೇಳಿದ್ದಾರೆ.
ಇದನ್ನೂ ಓದಿ:
“ಕಾವೇರಿ ನದಿ ಇಡೀ ದೇಶದ ಆಸ್ತಿ, ಇದು ಉಭಯ ರಾಜ್ಯಗಳ ಕುಡಿಯುವ ನೀರು, ಕೃಷಿ, ಕೈಗಾರಿಕೆ ಹಾಗೂ ಪ್ರಾಣಿ-ಪಕ್ಷಿಗಳಿಗೆ ಆಸರೆಯಾಗಿದೆ. ಸುಪ್ರೀಂ ಕೋರ್ಟ್ ತೀರ್ಪನ್ನು ಗೌರವಿಸಿ, ಪರಸ್ಪರ ಹೋರಾಡುವುದನ್ನು ಬಿಟ್ಟು ರೈತರ ಮುಖದಲ್ಲಿ ನಗು ಮೂಡಿಸಲು ನಾವೆಲ್ಲರೂ ಒಂದಾಗಿ ಕೆಲಸ ಮಾಡೋಣ” ಎಂದು ತಮಿಳುನಾಡು ಸಿಎಂ ವಿಜಯ್ ಅವರಿಗೆ ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.



