ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾನ್ಯವಾಗಿ ನಾವು ರಸ್ತೆಗಳಲ್ಲಿ ಓಡಾಡುವ ಆಟೋ ಅಥವಾ ಬೈಕ್ಗಳ ಹಿಂಬದಿಯಲ್ಲಿ ನಾನಾ ಬಗೆಯ ಆಕರ್ಷಕ ಸಾಲುಗಳನ್ನು ನೋಡಿರುತ್ತೇವೆ. ಕೆಲವು ಸಾಲುಗಳು ಜೀವನದ ಪಾಠ ಹೇಳಿಕೊಟ್ಟರೆ, ಇನ್ನು ಕೆಲವು ನಗು ಮೂಡಿಸುತ್ತವೆ. ಆದರೆ ಇನ್ಸ್ಟಾಗ್ರಾಮ್ನಲ್ಲಿ ಭಾರೀ ವೈರಲ್ ಆಗಿರುವ ಈ ಆಟೋ ಹಿಂಬದಿಯ ಸಾಲು ಮಾತ್ರ ಓದುಗರ ಕಣ್ಣಾಲಿಗಳನ್ನು ಒದ್ದೆಯಾಗಿಸುತ್ತಿದೆ. ಅಲ್ಲಿ ಬರೆದಿರುವ ಪ್ರತಿ ಅಕ್ಷರದಲ್ಲೂ ಒಬ್ಬ ಗಂಡನ ನೈಜ ಪ್ರೀತಿ ಮತ್ತು ನೋವಿನ ಬದುಕಿನ ಕಥೆ ಅಡಗಿದೆ.
ಇನ್ಸ್ಟಾಗ್ರಾಮ್ನ ‘ಬಾಬುಗ್ ವೈಬ್ಸ್’ (babugvibes) ಎಂಬ ಖಾತೆಯಲ್ಲಿ ವ್ಲಾಗರ್ ಒಬ್ಬರು ಶೇರ್ ಮಾಡಿರುವ ವಿಡಿಯೋದಲ್ಲಿ ಈ ಪ್ರೇಮಕಥೆ ಬಯಲಾಗಿದೆ. ರಸ್ತೆಯಲ್ಲಿ ಹೋಗುತ್ತಿದ್ದ ಆಟೋದ ಹಿಂದೆ, “ಕೊನೆಯವರೆಗೂ ಇರುತ್ತೇನೆ ಎಂದಳು, ಮಾತು ತಪ್ಪಲಿಲ್ಲ. ಈಗಲೂ ಜೊತೆಗೇ ಇದ್ದಾಳೆ, ಒಮ್ಮೆ ನೆನಪಾಗಿ, ಮತ್ತೊಮ್ಮೆ ನೋವಾಗಿ” ಎಂದು ಬರೆಯಲಾಗಿತ್ತು. ಇದನ್ನು ಕುತೂಹಲದಿಂದ ಓದಿದ ವ್ಲಾಗರ್, ಆಟೋ ಚಾಲಕನ ಹತ್ತಿರ ಹೋಗಿ ಈ ಸಾಲುಗಳ ಹಿನ್ನೆಲೆಯನ್ನು ಕೆದಕಿದಾಗ ಭಾವುಕವಾಗುವಂತಹ ಉತ್ತರ ಸಿಕ್ಕಿದೆ.
ಮಗಳಿಗಾಗಿ ಸಾಗುತ್ತಿದೆ ಚಾಲಕನ ಜೀವನ ಪಯಣ
ಆಟೋ ಚಾಲಕ ಕಣ್ಣೀರು ತುಂಬಿದ ಕಣ್ಣುಗಳಿಂದ ತನ್ನ ಬದುಕನ್ನು ಬಿಚ್ಚಿಟ್ಟಿದ್ದಾನೆ. “ನನ್ನ ಪತ್ನಿ ಗರ್ಭಿಣಿಯಾಗಿದ್ದ ಸಂದರ್ಭದಲ್ಲೇ ನನ್ನನ್ನು ಒಂಟಿ ಮಾಡಿ ಇಹಲೋಕ ತ್ಯಜಿಸಿದಳು. ಅವಳು ದೈಹಿಕವಾಗಿ ದೂರಾಗಿದ್ದರೂ ನನ್ನ ನೆನಪುಗಳಲ್ಲಿ ಎಂದಿಗೂ ನನ್ನ ಜೊತೆಯಲ್ಲೇ ಇದ್ದಾಳೆ. ಹೋಗುವಾಗ ಅವಳು ನನ್ನೊಂದಿಗೆ ಬದುಕಲು ಒಂದು ಪುಟ್ಟ ಮಗಳನ್ನು ಬಿಟ್ಟು ಹೋಗಿದ್ದಾಳೆ. ಈಗ ನನ್ನ ಇಡೀ ಜೀವನ ಆ ಮಗಳಿಗಾಗಿ ಮಾತ್ರ ಮೀಸಲು, ಅವಳಿಗಾಗಿಯೇ ನಾನು ಆಟೋ ಓಡಿಸುತ್ತಾ ಬದುಕುತ್ತಿದ್ದೇನೆ” ಎಂದು ಹೇಳಿದ್ದಾನೆ.
ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸದ್ಯ 63 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋ ನೋಡಿದ ನೆಟ್ಟಿಗರು ಕಮೆಂಟ್ ಬಾಕ್ಸ್ನಲ್ಲಿ ತಮ್ಮ ಭಾವನೆಗಳನ್ನು ಹೊರಹಾಕುತ್ತಿದ್ದಾರೆ. “ಮಡದಿಗಷ್ಟೇ ಮರಣ, ಆದರೆ ಪ್ರೀತಿ ಯಾವತ್ತಿಗೂ ಅಮರ” ಎಂದು ಒಬ್ಬರು ಕಮೆಂಟ್ ಮಾಡಿದರೆ, ಮಗದೊಬ್ಬರು “ಈ ನೈಜ ಪ್ರೇಮಕಥೆ ಕೇಳಿ ಒಂದು ಕ್ಷಣ ಕಣ್ಣಲ್ಲಿ ನೀರು ಬಂತು ಅಣ್ಣ” ಎಂದು ಚಾಲಕನಿಗೆ ಧೈರ್ಯ ತುಂಬುತ್ತಿದ್ದಾರೆ.



