November 12, 2026
Thursday, November 12, 2026
spot_img

ಪಿತ್ರೋಡಾಗೆ ದೀಪಾವಳಿ ಶುಭಾಶಯ ಕೋರಿದ ಪ್ರಧಾನಿ ಮೋದಿ: ‘ನಮಗೂ ವಿಶ್ ಮಾಡಿ’ ಎಂದ ನೆಟ್ಟಿಗರು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ರಾಜಕೀಯ ವೇದಿಕೆಯಲ್ಲಿ ಪರಸ್ಪರ ಟೀಕೆ, ವಾಗ್ದಾಳಿ ಸಾಮಾನ್ಯ. ಆದರೆ ಹಬ್ಬದ ಸಂದರ್ಭದಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ನಾಯಕ ಸ್ಯಾಮ್ ಪಿತ್ರೋಡಾ ಅವರಿಗೆ ದೀಪಾವಳಿ ಶುಭಾಶಯ ಕೋರಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಕುತೂಹಲದ ಚರ್ಚೆಗೆ ಕಾರಣವಾಗಿದೆ. ಅಷ್ಟೇ ಅಲ್ಲ, ಮೋದಿಯವರ ಈ ಶುಭಾಶಯ ಕಂಡ ನೆಟ್ಟಿಗರೊಬ್ಬರು ತಮಗೂ ಶುಭ ಹಾರೈಸುವಂತೆ ಕೇಳಿದ್ದು, ಅದಕ್ಕೆ ಪ್ರಧಾನಿಯವರು ನೀಡಿದ ಪ್ರತಿಕ್ರಿಯೆಯೂ ಗಮನ ಸೆಳೆದಿದೆ.

ಸ್ಯಾಮ್ ಪಿತ್ರೋಡಾಗೆ ‘ಸ್ಯಾಮ್ ಭಾಯ್’ ಎಂದು ಶುಭಾಶಯ

ಕಾಂಗ್ರೆಸ್‌ನ ವಿದೇಶ ವಿಭಾಗದ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ಅವರು ಇತ್ತೀಚೆಗೆ ಪ್ರಧಾನಿ ಮೋದಿಯವರ ವ್ಯಕ್ತಿತ್ವವನ್ನು ಮೆಚ್ಚಿ ಮಾತನಾಡಿದ್ದರು. ಮೋದಿ ಒಳ್ಳೆಯ ವ್ಯಕ್ತಿ, ಪರಿಶ್ರಮಿ ಹಾಗೂ ಉತ್ತಮ ವಾಗ್ಮಿ. ಅವರೊಂದಿಗೆ ವೈಯಕ್ತಿಕವಾಗಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಆದರೆ ಅವರ ರಾಜಕೀಯ ಸಿದ್ಧಾಂತಗಳನ್ನು ಮಾತ್ರ ಒಪ್ಪುವುದಿಲ್ಲ ಎಂದು ಪಿತ್ರೋಡಾ ಹೇಳಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಮೋದಿ, ಎಕ್ಸ್‌ನಲ್ಲಿ ಸ್ಯಾಮ್ ಪಿತ್ರೋಡಾ ಅವರನ್ನು ‘ಸ್ಯಾಮ್ ಭಾಯ್’ ಎಂದು ಸಂಬೋಧಿಸಿ, ಅವರಿಗೆ ಹಾಗೂ ಅಂಜನಾ ಬೆನ್ ಅವರಿಗೆ ದೀಪಾವಳಿ ಮತ್ತು ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿದ್ದರು.

ನೆಟ್ಟಿಗನ ಮನವಿಗೆ ಮೋದಿಯ ಉತ್ತರ

ಪ್ರಧಾನಿಯವರ ಈ ಪೋಸ್ಟ್ ಕಂಡ ಮಿಹಿರ್ ಝಾ ಎಂಬ ಎಕ್ಸ್ ಬಳಕೆದಾರರು, ‘ಸ್ಯಾಮ್ ಪಿತ್ರೋಡಾಗೆ ದೀಪಾವಳಿ ಶುಭಾಶಯ ಹೇಳುವಂತೆಯೇ ನಮಗೂ ಶುಭಾಶಯ ತಿಳಿಸಿ ಮೋದಿ ಜೀ’ ಎಂದು ಮನವಿ ಮಾಡಿದ್ದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಮೋದಿ, ನಿಮಗೂ ಹ್ಯಾಪಿ ದೀಪಾವಳಿ ಮಿಹಿರ್ ಭಾಯ್. ಹಬ್ಬದ ಋತು ಮತ್ತು ಮುಂಬರುವ ವರ್ಷ ಉತ್ತಮವಾಗಿರಲಿ ಎಂದು ಹಾರೈಸಿದರು. ನಗುವಿನ ಇಮೋಜಿಯನ್ನೂ ಸೇರಿಸಿದ್ದರು.

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ

ರಾಜಕೀಯ ಭಿನ್ನಾಭಿಪ್ರಾಯಗಳ ನಡುವೆಯೂ ವೈಯಕ್ತಿಕ ಗೌರವ ಮತ್ತು ಹಬ್ಬದ ಶುಭಾಶಯಗಳಿಗೆ ಅವಕಾಶವಿದೆ ಎಂಬ ಸಂದೇಶ ಈ ಸಂಭಾಷಣೆಯಿಂದ ವ್ಯಕ್ತವಾಗಿದೆ. ರಾಜಕೀಯದಾಚೆಗಿನ ಇಂತಹ ಸಣ್ಣ ಸಂವಾದವೇ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯುತ್ತಿದೆ.

Must Read