November 12, 2026
Thursday, November 12, 2026
spot_img

ಹಾಸನಾಂಬೆ ಹುಂಡಿಗೆ ಕುಬೇರನ ಕೃಪೆ: 14 ದಿನಗಳ ಉತ್ಸವದಲ್ಲಿ 29.55 ಕೋಟಿ ರೂ. ಆದಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಹಾಸನದ ಅಧಿದೇವತೆ ಹಾಸನಾಂಬೆ ದರುಶನೋತ್ಸವ ಮುಕ್ತಾಯಗೊಂಡ ಬೆನ್ನಲ್ಲೇ ದೇವಾಲಯದ ಆದಾಯದ ಲೆಕ್ಕಾಚಾರ ಹೊರಬಿದ್ದಿದೆ.

ಈ ಬಾರಿಯ ಉತ್ಸವದಲ್ಲಿ ಭಕ್ತರು ದೇವಿಗೆ ಸಲ್ಲಿಸಿದ ಕಾಣಿಕೆ ಹಾಗೂ ಟಿಕೆಟ್, ಲಡ್ಡು ಪ್ರಸಾದ ಮಾರಾಟ ಸೇರಿದಂತೆ ವಿವಿಧ ಮೂಲಗಳಿಂದ ಒಟ್ಟು 29.55 ಕೋಟಿ ಆದಾಯ ಸಂಗ್ರಹವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ದೇವಾಲಯದ ಆದಾಯದಲ್ಲಿ ಸುಮಾರು 4 ಕೋಟಿ ಹೆಚ್ಚಳವಾಗಿರುವುದು ವಿಶೇಷ.

ದರ್ಶನೋತ್ಸವದ ಬಳಿಕ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ 3.71 ಕೋಟಿ ನಗದು ಸಂಗ್ರಹವಾಗಿದೆ. ಇನ್ನು ದರುಶನ ಟಿಕೆಟ್ ಮತ್ತು ಲಡ್ಡು ಪ್ರಸಾದ ಮಾರಾಟದಿಂದ 25.82 ಕೋಟಿ ಆದಾಯ ಬಂದಿದೆ. 2025ರಲ್ಲಿ ಎಲ್ಲ ಮೂಲಗಳಿಂದ 25.59 ಕೋಟಿ ಸಂಗ್ರಹವಾಗಿತ್ತು ಎಂದು ದೇವಾಲಯದ ಆಡಳಿತ ಅಧಿಕಾರಿ ಮಾಹಿತಿ ನೀಡಿದ್ದಾರೆ.

30 ಲಕ್ಷಕ್ಕೂ ಅಧಿಕ ಭಕ್ತರಿಂದ ದರುಶನ

ಈ ಬಾರಿ ಹಾಸನಾಂಬೆ ದರುಶನಕ್ಕೆ ಭಕ್ತಸಾಗರವೇ ಹರಿದುಬಂದಿತ್ತು. 2025ರಲ್ಲಿ 25.36 ಲಕ್ಷ ಭಕ್ತರು ದೇವಿಯ ದರುಶನ ಪಡೆದಿದ್ದರೆ, 2026ರಲ್ಲಿ ಬರೋಬ್ಬರಿ 30.06 ಲಕ್ಷ ಭಕ್ತರು ಹಾಸನಾಂಬೆಯ ದರುಶನ ಮಾಡಿದ್ದಾರೆ. ಭಕ್ತರ ಸಂಖ್ಯೆಯಲ್ಲಿನ ಈ ಹೆಚ್ಚಳ ದೇವಾಲಯದ ಆದಾಯದಲ್ಲೂ ಪ್ರತಿಫಲಿಸಿದೆ.

ಇದನ್ನೂ ಓದಿ:

ಹುಂಡಿಯಲ್ಲಿ ನಗದು ಮಾತ್ರವಲ್ಲದೆ 43 ಗ್ರಾಂ ಚಿನ್ನಾಭರಣ ಹಾಗೂ 1 ಕೆ.ಜಿ. 255 ಗ್ರಾಂ ಬೆಳ್ಳಿಯ ಆಭರಣಗಳೂ ಪತ್ತೆಯಾಗಿವೆ. ಸಿಂಗಾಪುರ, ಓಮನ್, ಬಹ್ರೇನ್, ಅಮೆರಿಕ, ಯುಎಇ ಮತ್ತು ಚೀನಾದ ಕರೆನ್ಸಿಗಳನ್ನು ಭಕ್ತರು ಕಾಣಿಕೆಯಾಗಿ ಸಲ್ಲಿಸಿದ್ದಾರೆ.

600 ಸಿಬ್ಬಂದಿಯಿಂದ ಹುಂಡಿ ಎಣಿಕೆ

ಹುಂಡಿ ಹಣದ ಎಣಿಕೆ ಕಾರ್ಯದಲ್ಲಿ ಕಂದಾಯ ಇಲಾಖೆಯ 500 ಸಿಬ್ಬಂದಿ, ಸ್ಕೌಟ್ಸ್ ಮತ್ತು ಗೈಡ್ಸ್‌ನ 50 ಸಿಬ್ಬಂದಿ ಸೇರಿದಂತೆ ಒಟ್ಟು 600 ಮಂದಿ ಪಾಲ್ಗೊಂಡಿದ್ದರು.

ಅಕ್ಟೋಬರ್ 29ರಿಂದ ನವೆಂಬರ್ 11ರವರೆಗೆ 14 ದಿನಗಳ ಕಾಲ ನಡೆದ ಹಾಸನಾಂಬೆ ಉತ್ಸವ ನವೆಂಬರ್ 11ರಂದು ಸಾಂಪ್ರದಾಯಿಕ ಪೂಜೆಯೊಂದಿಗೆ ಮುಕ್ತಾಯಗೊಂಡಿತು. ಸಾರ್ವಜನಿಕರಿಗೆ ಅಕ್ಟೋಬರ್ 30ರಿಂದ ನವೆಂಬರ್ 10ರವರೆಗೆ 12 ದಿನ ದರುಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

Must Read