March 28, 2026
Saturday, March 28, 2026
spot_img

ಏಷ್ಯಾಕಪ್‌ ನಲ್ಲಿ ನಿಯಮ ಉಲ್ಲಂಘನೆ: ಪಾಕಿಸ್ತಾನ ಕ್ರಿಕೆಟ್‌ ವಿರುದ್ಧ ಕ್ರಮಕ್ಕೆ ಮುಂದಾದ ಐಸಿಸಿ!

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾಕಪ್‌ ಟಿ20 ಟೂರ್ನಿಯಲ್ಲಿ ನಿಯಮ ಉಲ್ಲಂಘಿಸುತ್ತಿರುವ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) ವಿರುದ್ಧ ಕ್ರಮಕೈಗೊಳ್ಳಲು ಅಂತಾರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌(ಐಸಿಸಿ) ಮುಂದಾಗಿದೆ.

ಈ ಬಗ್ಗೆ ಪಿಸಿಬಿಗೆ ಐಸಿಸಿ ಸಿಇಒ ಸಂಗೋಜ್‌ ಗುಪ್ತಾ ಪತ್ರ ಬರೆದಿದ್ದು, ಯುಎಇ ವಿರುದ್ಧ ಪಂದ್ಯದ ದಿನ ಪಾಕಿಸ್ತಾನ ನಿಯಮ ಉಲ್ಲಂಘಿಸಿದೆ ಎಂದಿದ್ದಾರೆ. ಆಟಗಾರರು ಮತ್ತು ಮ್ಯಾಚ್‌ ಅಧಿಕಾರಿಗಳಿಗೆ ಮಾತ್ರ ಪ್ರವೇಶವಿರುವ ಸ್ಥಳಕ್ಕೆ ಪಾಕ್‌ ಮಾಧ್ಯಮ ವ್ಯವಸ್ಥಾಪಕ ಪ್ರವೇಶಿಸಿದ್ದಾರೆ. ಅಲ್ಲದೆ, ರೆಫ್ರಿ ಆ್ಯಂಡಿ ಪೈಕ್ರಾಫ್ಟ್‌, ಪಾಕ್‌ ನಾಯಕ, ಕೋಚ್‌ ಜೊತೆಗಿನ ಮಾತುಕತೆಯ ವಿಡಿಯೋ ಚಿತ್ರೀಕರಣ ಮಾಡಿ, ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಈ ಮೂಲಕ ನಿಯಮ ಉಲ್ಲಂಘಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು, ರೆಫ್ರಿ ಪಾಕ್‌ ತಂಡದ ಬಳಿ ಕ್ಷಮೆಯಾಚಿಸಿದ್ದಾರೆ ಎಂಬ ಪಿಸಿಬಿ ಹೇಳಿಕೆಗೂ ಐಸಿಸಿ ಆಕ್ಷೇಪ ವ್ಯಕ್ತಪಡಿಸಿದೆ. ವಾಸ್ತವವಾಗಿ ಅವರು ತಪ್ಪಾದ ಸಂವಹನಕ್ಕಾಗಿ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ಐಸಿಸಿ ತಿಳಿಸಿದೆ .

ರೆಫ್ರಿ ಕ್ಷಮೆಯಾಚಿಸಿದ್ದಾರೆಂದು ಸುಳ್ಳು ಹೇಳಿದ ಪಾಕ್‌ ?
ಭಾರತೀಯ ಆಟಗಾರರ ನೋ ಶೇಕ್‌ಹ್ಯಾಂಡ್‌ ವಿವಾದಕ್ಕೆ ಸಂಬಂಧಿಸಿದಂತೆ ಮ್ಯಾಚ್‌ ರೆಫ್ರಿ ಆ್ಯಂಡಿ ಪೈಕ್ರಾಫ್ಟ್‌ ಪಾಕಿಸ್ತಾನ ತಂಡದ ಬಳಿ ಕ್ಷಮೆಯಾಚಿಸಿದ್ದಾರೆ ಎಂದು ಪಾಕ್‌ ಕ್ರಿಕೆಟ್‌ ಮಂಡಳಿ(ಪಿಸಿಬಿ) ಬುಧವಾರ ಹೇಳಿಕೊಂಡಿತ್ತು. ಆದರೆ ಕ್ಷಮೆಯಾಚನೆ ವಿಚಾರದಲ್ಲಿ ಪಾಕ್‌ ಸುಳ್ಳು ಹೇಳಿದೆ ಎಂದು ಏಷ್ಯಾಕಪ್‌ ಮೂಲಗಳು ಮಾಧ್ಯಮಗಳಿಗೆ ತಿಳಿಸಿದ್ದಾಗಿ ವರದಿಯಾಗಿವೆ.

ಭಾರತ-ಪಾಕ್‌ ಪಂದ್ಯದ ವೇಳೆ ಆಟಗಾರರ ಹಸ್ತಲಾಘವ ನಿಷೇಧಿಸಿದ್ದಕ್ಕೆ ಐಸಿಸಿಯ ವಿವಾದಾತ್ಮಕ ಮ್ಯಾಚ್‌ ರೆಫ್ರಿ ಆಂಡಿ ಪೈಕ್ರಾಫ್ಟ್ ಪಾಕಿಸ್ತಾನ ತಂಡದ ವ್ಯವಸ್ಥಾಪಕ ಮತ್ತು ನಾಯಕನ ಬಳಿ ಕ್ಷಮೆಯಾಚಿಸಿದ್ದಾರೆ ಎಂದು ಪಿಸಿಬಿ ಹೇಳಿತ್ತು. ಆದರೆ ಮೂಲಗಳ ಪ್ರಕಾರ, ಯಾವುದೇ ತಪ್ಪು ಮಾಡದ ರೆಫ್ರಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ, ಕೇಳಿಯೂ ಇಲ್ಲ ಎಂದು ಗೊತ್ತಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !