ಹೊಸದಿಗಂತ ವರದಿ ಭಟ್ಕಳ:
ಜಾನುವಾರುಗಳನ್ನು ಸೂಕ್ತ ಆರೈಕೆ ಮಾಡದೆ, ಆಹಾರ ಮತ್ತು ಕುಡಿಯುವ ನೀರಿನ ಸೌಲಭ್ಯವನ್ನೂ ಒದಗಿಸದೆ ತೆಂಗಿನ ಮರಗಳಿಗೆ ಕಟ್ಟಿಹಾಕಿದ್ದ ಘಟನೆ ಭಟ್ಕಳ ಪಟ್ಟಣದಲ್ಲಿ ಪತ್ತೆಯಾಗಿದೆ. ಈ ಸಂಬಂಧ ಭಟ್ಕಳ ನಗರ ಪೊಲೀಸರು ದಾಳಿ ನಡೆಸಿ ಏಳು ಜಾನುವಾರುಗಳನ್ನು ರಕ್ಷಿಸಿದ್ದು, ಒಂದು ಎತ್ತು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಪಟ್ಟಣದ ಮೈನುದ್ದೀನ್ ಸ್ಟ್ರೀಟ್ 2ನೇ ಕ್ರಾಸ್ನ ಬ್ಲಾಕ್ ಬಿ ಪ್ರದೇಶದಲ್ಲಿರುವ ಖಾಲಿ ಜಾಗದಲ್ಲಿ ಜಾನುವಾರುಗಳನ್ನು ಅಮಾನವೀಯವಾಗಿ ಕಟ್ಟಿಹಾಕಲಾಗಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಈ ವೇಳೆ ತೌಶಿಫ್ ಮಹಮ್ಮದ್ ಖಾಸಿಂ ಸಾಹೇಬ್ ಎಂಬಾತನ ಮನೆಯ ಸಮೀಪದ ಖಾಲಿ ಜಾಗದಲ್ಲಿ ಒಟ್ಟು ಎಂಟು ಜಾನುವಾರುಗಳನ್ನು ತೆಂಗಿನ ಮರಗಳಿಗೆ ಹಗ್ಗಗಳಿಂದ ಕಟ್ಟಿಹಾಕಿರುವುದು ಕಂಡುಬಂದಿದೆ. ಅವುಗಳಿಗೆ ಆಹಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿರಲಿಲ್ಲ.
ಇದನ್ನೂ ಓದಿ:
ಪೊಲೀಸರ ಪರಿಶೀಲನೆ ಸಂದರ್ಭದಲ್ಲಿ ಒಂದು ಎತ್ತು ಮೃತಪಟ್ಟಿರುವುದು ಪತ್ತೆಯಾಗಿದ್ದು, ಉಳಿದ ಏಳು ಜಾನುವಾರುಗಳನ್ನು ವಶಕ್ಕೆ ಪಡೆದು ರಕ್ಷಿಸಲಾಗಿದೆ. ವಶಪಡಿಸಿಕೊಂಡ ಜಾನುವಾರುಗಳ ಒಟ್ಟು ಅಂದಾಜು ಮೌಲ್ಯ 89 ಸಾವಿರ ರೂ ಎಂದು ತಿಳಿದುಬಂದಿದೆ.
ಭಟ್ಕಳ ನಗರ ಪೊಲೀಸ್ ಠಾಣೆಯ ತನಿಖಾ ವಿಭಾಗದ ಪಿಎಸ್ಐ ತಿಮ್ಮಪ್ಪ ಅವರು ಸರ್ಕಾರದ ಪರವಾಗಿ ದೂರು ದಾಖಲಿಸಿದ್ದಾರೆ.



