November 18, 2026
Wednesday, November 18, 2026
spot_img

ಎಥೆನಾಲ್ ಮಿಶ್ರಣ ವಿವಾದ: ರಿಜ್ವಾನ್ ಅರ್ಷದ್‌ಗೆ ಮುರುಗೇಶ್ ನಿರಾಣಿ ತಿರುಗೇಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಪೆಟ್ರೋಲ್ ಬಂಕ್‌ನಲ್ಲಿ ಗ್ರಾಹಕರು ಹಣ ಕೊಟ್ಟು ಖರೀದಿಸುವ ಇಂಧನದಲ್ಲಿ ನಿಜಕ್ಕೂ ಎಷ್ಟು ಎಥೆನಾಲ್ ಮಿಶ್ರಣವಾಗಿದೆ? ವಾಹನಗಳಿಗೆ ಮೈಲೇಜ್ ಕಡಿಮೆಯಾಗುತ್ತಿರುವುದಕ್ಕೆ ಇಂಧನದ ಗುಣಮಟ್ಟವೇ ಕಾರಣವೇ? ಇಂತಹ ಪ್ರಶ್ನೆಗಳ ನಡುವೆ ಕರ್ನಾಟಕ ಮತ್ತು ಕೇಂದ್ರದ ನಡುವಿನ ಎಥೆನಾಲ್ ವಿವಾದ ಮತ್ತಷ್ಟು ತೀವ್ರಗೊಂಡಿದೆ.

ರಾಜ್ಯ ಸರ್ಕಾರ ನಡೆಸಿದ ಇಂಧನ ಮಾದರಿ ಪರೀಕ್ಷೆಯಲ್ಲಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಪತ್ತೆಯಾಗಿದೆ ಎಂಬ ಆರೋಪ ಇದೀಗ ರಾಜಕೀಯ ವಾಕ್ಸಮರಕ್ಕೂ ವೇದಿಕೆಯಾಗಿದೆ.

14 ಮಾದರಿಗಳಲ್ಲಿ 11ರಲ್ಲಿ ಶೇ.20ಕ್ಕಿಂತ ಹೆಚ್ಚು ಎಥೆನಾಲ್

ಈ ಸಂಬಂಧ ರಾಜ್ಯ ಸಚಿವ ರಿಜ್ವಾನ್ ಅರ್ಷದ್ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಅವರಿಗೆ ಪತ್ರ ಬರೆದಿದ್ದಾರೆ. ಎಥೆನಾಲ್ ಮಿಶ್ರಣ ಕಾರ್ಯಕ್ರಮಕ್ಕೆ ರಾಜ್ಯದ ವಿರೋಧವಿಲ್ಲ. ಆದರೆ ಮಿತಿಮೀರಿದ ಮಿಶ್ರಣದಿಂದ ವಾಹನಗಳಿಗೆ ಹಾನಿಯಾಗುತ್ತಿದೆ ಮತ್ತು ಮೈಲೇಜ್ ಕುಸಿಯುತ್ತಿದೆ ಎಂಬ ದೂರುಗಳು ಸಾರ್ವಜನಿಕರಿಂದ ಬರುತ್ತಿವೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಸೆಪ್ಟೆಂಬರ್‌ನಲ್ಲಿ ರಾಜ್ಯದ ವಿವಿಧ ಪೆಟ್ರೋಲ್ ಬಂಕ್‌ಗಳಿಂದ 14 ಮಾದರಿಗಳನ್ನು ಸಂಗ್ರಹಿಸಿ NABL ಮಾನ್ಯತೆ ಪಡೆದ ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗಿದೆ. ಈ ಪೈಕಿ 11 ಮಾದರಿಗಳಲ್ಲಿ ಶೇ.20ಕ್ಕಿಂತ ಹೆಚ್ಚಿನ ಎಥೆನಾಲ್ ಪತ್ತೆಯಾಗಿದೆ. ಕೆಲವು ಮಾದರಿಗಳಲ್ಲಿ ಮಿಶ್ರಣದ ಪ್ರಮಾಣ ಶೇ.13.5ರಿಂದ ಶೇ.31.2ರವರೆಗೆ ದಾಖಲಾಗಿದೆ ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ:

ಪೆಟ್ರೋಲ್ ಬಂಕ್‌ಗಳಿಗೂ ಹೊಸ ನಿಯಮದ ವಿರೋಧ

ಪೆಟ್ರೋಲ್ ಡಿಸ್ಪೆನ್ಸರ್‌ಗಳ ಪರಿಶೀಲನಾ ಅವಧಿಯನ್ನು 12 ತಿಂಗಳಿಂದ 24 ತಿಂಗಳಿಗೆ ಹೆಚ್ಚಿಸುವ ಕೇಂದ್ರದ ಅಧಿಸೂಚನೆಗೂ ರಾಜ್ಯ ಸರ್ಕಾರ ಆಕ್ಷೇಪ ವ್ಯಕ್ತಪಡಿಸಿದೆ. ಅಲ್ಲದೆ ಪ್ರತಿ ಬಂಕ್‌ನಲ್ಲಿ ಎಥೆನಾಲ್ ಪ್ರಮಾಣ ಪ್ರದರ್ಶಿಸುವುದು, ಬಿಲ್‌ನಲ್ಲಿ ಅದರ ವಿವರ ನಮೂದಿಸುವುದು ಮತ್ತು ವಾಹನಗಳಿಗೆ ಹಾನಿಯಾದರೆ ಪರಿಹಾರ ನೀಡುವ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದೆ.

ಇದೇ ವೇಳೆ, ಶೇ.90ರಷ್ಟು ಪೆಟ್ರೋಲ್ ಬಂಕ್‌ಗಳ ನಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಗ್ರಾಹಕರಿಗೆ ಕಡಿಮೆ ಇಂಧನ ವಿತರಣೆಯಾಗುತ್ತಿದೆ ಎಂಬ ಆರೋಪವನ್ನೂ ರಿಜ್ವಾನ್ ಅರ್ಷದ್ ಮಾಡಿದ್ದಾರೆ.

ಮುರುಗೇಶ್ ನಿರಾಣಿ ತಿರುಗೇಟು

ಕರ್ನಾಟಕದ ಆರೋಪಗಳಿಗೆ ಮಾಜಿ ಸಚಿವ ಮುರುಗೇಶ್ ನಿರಾಣಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಎಥೆನಾಲ್ ವಿಚಾರದಲ್ಲಿ ರಿಜ್ವಾನ್ ಅರ್ಷದ್ ಸುಳ್ಳು ಮಾಹಿತಿ ಹರಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಎಥೆನಾಲ್ ಉತ್ಪಾದನೆ ಹಿಂದಿನಿಂದಲೂ ನಡೆಯುತ್ತಿದ್ದು, ದೇಶದಲ್ಲಿ ಸುಮಾರು 500 ಉತ್ಪಾದನಾ ಘಟಕಗಳಿವೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರ ಯಾವ ಪೆಟ್ರೋಲಿಯಂ ಟರ್ಮಿನಲ್‌ನಿಂದ ಮಾದರಿ ಸಂಗ್ರಹಿಸಿದೆಯೇ? ಪರೀಕ್ಷೆ ವೇಳೆ ಯಾವ ಅಧಿಕಾರಿಗಳು ಉಪಸ್ಥಿತರಿದ್ದರು? ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲು ಹಾಕಿದ್ದಾರೆ. ಅಲ್ಲದೆ ಸಚಿವರು ಪ್ರತ್ಯೇಕ ಸಮಿತಿ ರಚಿಸಿ ಮಾದರಿಗಳ ಪರೀಕ್ಷೆ ನಡೆಸಲಿ ಎಂದು ಆಗ್ರಹಿಸಿದ್ದಾರೆ.

Must Read

Skip to toolbar