November 19, 2026
Thursday, November 19, 2026
spot_img

ಬಸವಣ್ಣನವರ ಅವಹೇಳನ ಸಹಿಸಲಾಗದು: ಲೇಖಕ ರವಿ ಹಂಜ್ ಕೃತಿಗೆ ಬೆಂಕಿ ಹಚ್ಚಿ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಸವಣ್ಣನವರ ಕುರಿತು ಲೇಖಕ ರವಿ ಹಂಜ್ ಬರೆದಿರುವ ಬಸವ ಮಂಟಪ ಕೃತಿಯಲ್ಲಿನ ಕೆಲವು ಬರಹಗಳು ಹಾಗೂ ಸಂದರ್ಶನವೊಂದರಲ್ಲಿ ಅವರು ನೀಡಿರುವ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ. ಬಸವಣ್ಣನವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಲಾಗಿದೆ ಎಂದು ಆರೋಪಿಸಿರುವ ಲಿಂಗಾಯತ ಸಮುದಾಯ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ರವಿ ಹಂಜ್‌ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದು, ಪುಸ್ತಕಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ.

ಅಮೆರಿಕದಲ್ಲಿ ನೆಲೆಸಿರುವ ಲೇಖಕ ರವಿ ಹಂಜ್ ಸುಮಾರು 600 ಪುಟಗಳ ‘ಬಸವ ಮಂಟಪ’ ಕೃತಿಯನ್ನು ರಚಿಸಿದ್ದು, ನವೆಂಬರ್ 15ರಂದು ಬೆಂಗಳೂರಿನ FKCCI ಸಭಾಂಗಣದಲ್ಲಿ ಪುಸ್ತಕ ಬಿಡುಗಡೆ ಮಾಡಲಾಗಿತ್ತು. ಇದೀಗ ಕೃತಿಯಲ್ಲಿನ ಕೆಲವು ವಿಚಾರಗಳು ಮತ್ತು ಬಸವಣ್ಣನವರ ಕುರಿತು ಲೇಖಕರು ನೀಡಿರುವ ಸಂದರ್ಶನದ ಹೇಳಿಕೆಗಳು ವಿವಾದದ ಕೇಂದ್ರವಾಗಿವೆ.

ಈ ವಿವಾದದ ಕುರಿತು ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ಸಚಿವರಾದ ಎಂ.ಬಿ. ಪಾಟೀಲ್ ಹಾಗೂ ಶರಣ ಪ್ರಕಾಶ ಪಾಟೀಲ್ ಅವರು ಲೇಖಕ ರವಿ ಹಂಜ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಸವಣ್ಣನವರು ಜಗತ್ತಿಗೆ ಮೊದಲ ಪಾರ್ಲಿಮೆಂಟ್‌ ನೀಡಿದವರು. ಕನ್ನಡದಲ್ಲಿ ವಚನಗಳನ್ನು ರಚಿಸುವ ಮೂಲಕ ಸಮಾಜವನ್ನು ತಿದ್ದುವ ಕೆಲಸ ಮಾಡಿದ ಮಹಾನ್‌ ವ್ಯಕ್ತಿ. ಅಂತಹ ಬಸವಣ್ಣನವರ ಕುರಿತು ಅವಹೇಳನಕಾರಿ ವಿಚಾರಗಳನ್ನು ಒಳಗೊಂಡಿರುವ ಪುಸ್ತಕವನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸಚಿವ ಎಂ.ಬಿ. ಪಾಟೀಲ್ ಆಗ್ರಹಿಸಿದ್ದಾರೆ. ಲಿಂಗಾಯತ ಸಂಸ್ಕೃತಿಯ ಮೇಲೆ ದಾಳಿ ಮಾಡಿದರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಸಿರುವ ಅವರು, ಈ ವಿಚಾರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನಕ್ಕೆ ತಂದು ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುವುದಾಗಿ ತಿಳಿಸಿದ್ದಾರೆ.

ಇದೇ ವೇಳೆ ಶಾಸಕ ಬಿ.ಆರ್. ಪಾಟೀಲ್ ಕೂಡ ಲೇಖಕ ರವಿ ಹಂಜ್ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಸವಣ್ಣನವರು ಲಿಂಗಾಯತ ಸಮುದಾಯದ ಗುರುತು. ಅವರು ನಮ್ಮ ತಂದೆ-ತಾಯಿಯಿದ್ದಂತೆ. ಕನ್ನಡದಲ್ಲಿ ವಚನಗಳನ್ನು ರಚಿಸಿ ಜನರನ್ನು ತಿದ್ದಿದವರು. ಮಹಿಳೆಯರಿಗೆ ಸಮಾನತೆ ನೀಡಬೇಕೆಂದು ಪ್ರತಿಪಾದಿಸಿದವರು. ಅಂತಹ ಬಸವಣ್ಣನವರನ್ನು ಕ್ರಿಮಿನಲ್‌ ಎಂಬಂತೆ ಬಿಂಬಿಸುವ ಪ್ರಯತ್ನ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ಲೇಖಕ ರವಿ ಹಂಜ್ ವಿರುದ್ಧ ಪೊಲೀಸರಿಗೆ ದೂರು ನೀಡುವುದಾಗಿ ಎಚ್ಚರಿಸಿರುವ ಬಿ.ಆರ್. ಪಾಟೀಲ್, ಅಗತ್ಯ ಬಿದ್ದರೆ ಸಮುದಾಯದವರು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದಿದ್ದಾರೆ.

Must Read