November 25, 2026
Wednesday, November 25, 2026
spot_img

ಚಿಕ್ಕಮಗಳೂರಿನಲ್ಲಿ ʼಆಪರೇಷನ್‌ ಗಜʼ ನಿಲ್ಲಿಸಿ! ಇಂದು ಮೂಡಿಗೆರೆ ಪಟ್ಟಣ ಬಂದ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ನಡೆಯುತ್ತಿರುವ ಆಪರೇಷನ್‌ ಗಜ ಕಾರ್ಯಾಚರಣೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಕಾರಣದಿಂದ ಇಂದು ಮೂಡಿಗೆರೆ ಪಟ್ಟದಲ್ಲಿ ಬಂದ್‌ಗೆ ಕರೆ ನೀಡಲಾಗಿದೆ.

ಹಾಸನದಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳನ್ನು ಚಿಕ್ಕಮಗಳೂರಿಗೆ ಶಿಫ್ಟ್‌ ಮಾಡಲು ತಯಾರಿ ನಡೆಯುತ್ತಿದೆ. ಇದಕ್ಕೆ ಮೂಡಿಗೆರೆ ಜನ ವಿರೋಧ ವ್ಯಕ್ತಪಡಿಸಿದ್ದಾರೆ. ತತ್ಕೋಳ ಅರಣ್ಯದ ಮೂಲಕ ಕಾಡಾನೆಗಳ ಸ್ಥಳಾಂತರಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

ಇಂದು (ನವೆಂಬರ್ 25) ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮೂಡಿಗೆರೆ ಬಂದ್ ಇರಲಿದ್ದು, ಹಲವು ಖಾಸಗಿ ಶಾಲಾ ಕಾಲೇಜುಗಳಿಗೆ ಈಗಾಗಲೇ ರಜೆ ಘೋಷಿಸಲಾಗಿದೆ. ಆಟೋ, ಟ್ಯಾಕ್ಸಿ ಚಾಲಕರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ್ದರೆ, ವ್ಯಾಪಾರಸ್ಥರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಹೋರಾಟದಲ್ಲಿ ಭಾಗಿಯಾಗಲು ನಿರ್ಧರಿಸಿದ್ದಾರೆ. ಸ್ವಯಂಪ್ರೇರಿತರಾಗಿ ಎಲ್ಲರೂ ಈ ಬಂದ್‌ಗೆ ಬೆಂಬಲ ನೀಡುತ್ತಿದ್ದಾರೆ.

ವನ್ಯಜೀವಿಗಳ ಪ್ರಾಣ ಮುಖ್ಯ. ಅಂತೆಯೇ ನಾವು ಮಲೆನಾಡಿಗರ ಪ್ರಾಣವೂ ಮುಖ್ಯ. ಆನೆ ಸ್ಥಳಾಂತರದ ಹೆಸರಿನಲ್ಲಿ ನಮ್ಮ ಪ್ರಾಣದ ಜೊತೆ ಆಟ ಆಡಬೇಡಿ ಎಂದು ಜನರು ಮನವಿ ಮಾಡಿದ್ದಾರೆ. ಹಾಸನ ಜಿಲ್ಲೆಯ ಬೇಲೂರಿನಿಂದ ಚಿಕ್ಕಮಗಳೂರು ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತ ಪ್ರದೇಶಕ್ಕೆ ಆನೆಗಳನ್ನು ಓಡಿಸುವ ಉದ್ದೇಶದಿಂದ ಕೈಗೊಂಡಿರುವ ‘ಆಪರೇಷನ್ ಗಜ ಕಾರ್ಯಾಚರಣೆ’ಗೂ ಮುನ್ನ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಜನರು ಗರಂ ಆಗಿದ್ದಾರೆ.

ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಪ್ರಮುಖ ರಾಜಕೀಯ ಪಕ್ಷಗಳು, ರೈತ ಸಂಘಟನೆಗಳು ಹಾಗೂ ಕನ್ನಡಪರ ಸಂಘಟನೆಗಳು ಬಂದ್‌ಗೆ ಬೆಂಬಲ ಸೂಚಿಸಿವೆ. ಪಕ್ಷಾತೀತವಾಗಿಯೂ ಈ ಬಂದ್‌ಗೆ ಬೆಂಬಲ ವ್ಯಕ್ತವಾಗಿದ್ದು, ಕಾಡಾನೆಗಳ ಸ್ಥಳಾಂತರದಿಂದ ಅವುಗಳು ಜನರ ಓಡಾಟದ ಪ್ರದೇಶಗಳಿಗೆ ಬಂದು ಹಾನಿಯಾಗುವ ಸಾಧ್ಯತೆಯ ಬಗ್ಗೆ ಸ್ಥಳೀಯರು ತೀವ್ರ ಆತಂಕ ವ್ಯಕ್ತಪಡಿಸಿದ್ದಾರೆ.

Must Read