ಹೊಸದಿಗಂತ ಡಿಜಿಟಲ್ ಡೆಸ್ಕ್:
ಇನ್ನು ಮುಂದೆ ಸ್ನೇಹಿತರು ಅಥವಾ ಕುಟುಂಬದವರ ಹುಟ್ಟುಹಬ್ಬಕ್ಕೆ ಮಧ್ಯರಾತ್ರಿ 12 ಗಂಟೆಗೆ ಎದ್ದು ಶುಭಾಶಯ ಕೋರಲು ಕಾಯಬೇಕಿಲ್ಲ. ಹಾಗೆಯೇ ಮುಖ್ಯವಾದ ಸಂದೇಶಗಳನ್ನು ಕಳುಹಿಸಲು ಮರೆತುಹೋಗುವ ಆತಂಕವೂ ಇರುವುದಿಲ್ಲ. ವೈಯಕ್ತಿಕ ಮತ್ತು ಗ್ರೂಪ್ ಚಾಟ್ಗಳಲ್ಲಿ ಮುಂಚಿತವಾಗಿಯೇ ಸಂದೇಶಗಳನ್ನು ಶೆಡ್ಯೂಲ್ ಮಾಡುವ ನೂತನ ಫೀಚರ್ ಅನ್ನು ವಾಟ್ಸಾಪ್ ಜಾಗತಿಕವಾಗಿ ಬಿಡುಗಡೆ ಮಾಡಿದೆ. ಈ ಬಗ್ಗೆ ವಾಟ್ಸಾಪ್ನ ಸಿಇಒ ಕುನಾಲ್ ಶಾ ಅವರು ‘ಎಕ್ಸ್’ ವೇದಿಕೆಯಲ್ಲಿ ಸಂತಸ ಹಂಚಿಕೊಂಡಿದ್ದು, ನೆಚ್ಚಿನವರಿಗೆ ಶುಭಕೋರಲು ಮೊದಲಿಗರಾಗುವಂತೆ ಬಳಕೆದಾರರಿಗೆ ಕರೆ ನೀಡಿದ್ದಾರೆ.
ಈ ಹೊಸ ಸೌಲಭ್ಯದ ಮೂಲಕ ಬಳಕೆದಾರರು ತಾವು ಕಳುಹಿಸಬೇಕಾದ ಸಂದೇಶಗಳನ್ನು ಕನಿಷ್ಠ 10 ನಿಮಿಷಗಳಿಂದ ಗರಿಷ್ಠ 14 ದಿನಗಳ ಮುಂಚಿತವಾಗಿಯೇ ನಿಗದಿಪಡಿಸಬಹುದು. ಕೇವಲ ಬರಹದ ಸಂದೇಶಗಳು ಮಾತ್ರವಲ್ಲದೆ, ಫೋಟೋ ಮತ್ತು ವಿಡಿಯೋಗಳನ್ನೂ ಕೂಡ ಸುಲಭವಾಗಿ ಶೆಡ್ಯೂಲ್ ಮಾಡುವ ಅವಕಾಶವಿದೆ. ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರಿಗೆ ಈ ಫೀಚರ್ ಜಾಗತಿಕವಾಗಿ ಹಂತ ಹಂತವಾಗಿ ಲಭ್ಯವಾಗುತ್ತಿದೆ.
ಬಳಸುವುದು ಹೇಗೆ?
ಈ ಫೀಚರ್ ಬಳಸುವುದು ಅತ್ಯಂತ ಸರಳವಾಗಿದೆ. ಚಾಟ್ ಬಾಕ್ಸ್ನಲ್ಲಿ ನಿಮ್ಮ ಸಂದೇಶವನ್ನು ಬರೆಯಿರಿ ಅಥವಾ ಫೋಟೋ ಇಲ್ಲವೇ ವಿಡಿಯೋ ಆಯ್ಕೆ ಮಾಡಿ. ಸಾಮಾನ್ಯವಾಗಿ ಕಳುಹಿಸುವ ಬಟನ್ ಒತ್ತುವ ಬದಲು, ‘ಸೆಂಡ್’ ಬಟನ್ ಅನ್ನು ಸ್ವಲ್ಪ ಹೊತ್ತು ಒತ್ತಿ ಹಿಡಿಯಬೇಕು. ಆಗ ತೆರೆದುಕೊಳ್ಳುವ ದಿನಾಂಕ ಮತ್ತು ಸಮಯದ ಪಟ್ಟಿಯಿಂದ ನಿಮಗೆ ಬೇಕಾದ ಅವಧಿಯನ್ನು ಆಯ್ಕೆ ಮಾಡಿ ಖಚಿತಪಡಿಸಿದರೆ ಸಾಕು. ನಿಗದಿತ ಸಮಯ ಬಂದಾಗ ಸಂದೇಶವು ಸ್ವಯಂಚಾಲಿತವಾಗಿ ತಲುಪುತ್ತದೆ. ಎದುರಿಗಿರುವವರಿಗೆ ಅದು ಎಂದಿನ ಸಾಮಾನ್ಯ ಸಂದೇಶದಂತೆಯೇ ಕಾಣಿಸುತ್ತದೆ.
ಫೋನ್ ಆಫ್ ಇದ್ದರೂ ತಲುಪುತ್ತೆ ಸಂದೇಶ
ಈ ಫೀಚರ್ನ ಅತಿದೊಡ್ಡ ವಿಶೇಷವೆಂದರೆ, ಸಂದೇಶವನ್ನು ಒಮ್ಮೆ ನಿಗದಿಪಡಿಸಿದ ನಂತರ ನಿಮ್ಮ ಫೋನ್ ಸ್ವಿಚ್ ಆಫ್ ಆಗಿರಲಿ, ಬ್ಯಾಟರಿ ಪೂರ್ತಿ ಖಾಲಿಯಾಗಿರಲಿ ಅಥವಾ ನೀವು ನೆಟ್ವರ್ಕ್ ವ್ಯಾಪ್ತಿಯಿಂದ ದೂರವಿರಲಿ ಯಾವುದೇ ತೊಂದರೆಯಿಲ್ಲದೆ ಸಮಯಕ್ಕೆ ಸರಿಯಾಗಿ ಸಂದೇಶ ತಲುಪುತ್ತದೆ. ಜೊತೆಗೆ, ಇತರ ಸಾಮಾನ್ಯ ಸಂದೇಶಗಳಂತೆಯೇ ಇವು ಕೂಡ ಎಂಡ್-ಟು-ಎಂಡ್ ಎನ್ಕ್ರಿಪ್ಟೆಡ್ ಆಗಿರುವುದರಿಂದ ಗೌಪ್ಯತೆಗೆ ಧಕ್ಕೆಯಿಲ್ಲ.
ಕಳುಹಿಸುವ ಮುನ್ನವೇ ತಾವು ಶೆಡ್ಯೂಲ್ ಮಾಡಿದ ಸಂದೇಶಗಳನ್ನು ನೋಡಲು ಮತ್ತು ಅಗತ್ಯಬಿದ್ದರೆ ಡಿಲೀಟ್ ಮಾಡಲು ಕೂಡ ಬಳಕೆದಾರರಿಗೆ ಸಂಪೂರ್ಣ ಅವಕಾಶವಿದೆ. ಒಟ್ಟಾರೆಯಾಗಿ, ಬಿಡುವಿಲ್ಲದ ಜೀವನಶೈಲಿಯಲ್ಲಿ ಮರೆವಿನ ಸಮಸ್ಯೆಯನ್ನು ನಿವಾರಿಸಿ, ಅಗತ್ಯ ಸಂದೇಶಗಳನ್ನು ಸರಿಯಾದ ಸಮಯಕ್ಕೆ ತಲುಪಿಸುವಲ್ಲಿ ಈ ಹೊಸ ಸೌಲಭ್ಯ ಮಹತ್ವದ ಪಾತ್ರ ವಹಿಸಲಿದೆ.



