Sunday, September 21, 2025

ಹ್ಯಾಂಡ್‌ಶೇಕ್ ವಿವಾದ: ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಪಾಕಿಸ್ತಾನದಿಂದ ಪತ್ರಿಕಾಗೋಷ್ಠಿ ರದ್ದು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾ ಕಪ್‌ ಟೂರ್ನಿಯಲ್ಲಿ ಭಾರತ ತಂಡದ ವಿರುದ್ಧದ ಸೂಪರ್‌-4ರ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ಕ್ರಿಕೆಟ್ ತಂಡ ಮತ್ತೊಮ್ಮೆ ವಿವಾದಕ್ಕೆ ಸಿಲುಕಿದೆ.

ಸೆಪ್ಟೆಂಬರ್ 21 ರಂದು ನಡೆಯಬೇಕಿದ್ದ ತನ್ನ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯನ್ನು ಪಾಕಿಸ್ತಾನ ರದ್ದುಗೊಳಿಸಿದೆ. ಇದಕ್ಕೂ ಮುನ್ನ ಯುಎಇ ವಿರುದ್ಧದ ಲೀಗ್‌ ಹಂತದ ತನ್ನ ಕೊನೆಯ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ತಂಡ ತನ್ನ ಸುದ್ದಿಗೋಷ್ಠಿಯನ್ನು ಕೂಡ ರದ್ದುಗೊಳಿಸಿತ್ತು.

ಭಾರತ ತಂಡ ತನ್ನ ಲೀಗ್‌ ಹಂತದಲ್ಲಿ ಪಾಕಿಸ್ತಾನ ತಂಡವನ್ನು ಏಳು ವಿಕೆಟ್‌ಗಳಿಂದ ಹೀನಾಯವಾಗಿ ಸೋಲಿಸಿತ್ತು. ಈ ಪಂದ್ಯದ ಬಳಿಕ ಟೀಮ್ ಇಂಡಿಯಾ ಆಟಗಾರರು, ಪಾಕಿಸ್ತಾನಿ ಆಟಗಾರರೊಂದಿಗೆ ಕೈಕುಲುಕಲು ನಿರಾಕರಿಸಿದ್ದರು. ಇದು ಪಾಕಿಸ್ತಾನ ತಂಡದ ನೈತಿಕತೆಯನ್ನು ಗಮನಾರ್ಹವಾಗಿ ಕುಗ್ಗಿಸಿತ್ತು. ಆಟಗಾರರ ನೈತಿಕತೆ ಹಾಗೂ ಆತ್ಮ ವಿಶ್ವಾಸವನ್ನು ಹೆಚ್ಚಿಸಲು ಟೀಮ್‌ ಮ್ಯಾನೇಜ್‌ಮೆಂಟ್‌, ಪ್ರೇರಕ ಭಾಷಣಕಾರ ಡಾ ರಹೀಲ್ ಅವರನ್ನು ಸಹ ಕರೆಸಿದೆ. ತಂಡದ ಪರಿಸ್ಥಿತಿ ತುಂಬಾ ಹದಗೆಟ್ಟಿದ್ದು, ಟೂರ್ನಿಯ ಮಧ್ಯದಲ್ಲಿ ಅವರಿಗೆ ಪ್ರೇರಕ ಭಾಷಣಕಾರರ ಅಗತ್ಯವಿತ್ತು.

ಇದಾದ ಬಳಿಕ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಭಾರತೀಯ ತಂಡದ ವಿರುದ್ಧ ಕ್ರಮ ಕೈಗೊಳ್ಳಲು ವಿಫಲವಾದ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ವಿರುದ್ಧ ದೂರು ದಾಖಲಿಸಿತು. ಪಿಸಿಬಿ ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಟೂರ್ನಿಯಿಂದ ಹಿಂದೆ ಸರಿಯುವುದಾಗಿ ಬೆದರಿಕೆ ಹಾಕಿತ್ತು ಮತ್ತು ಯುಎಇ ವಿರುದ್ಧದ ತಮ್ಮ ಮೂರನೇ ಪಂದ್ಯದ ಆರಂಭವನ್ನು ವಿಳಂಬಗೊಳಿಸಿತ್ತು.

ಇದನ್ನೂ ಓದಿ