ಹೊಸದಿಗಂತ ಡಿಜಿಟಲ್ ಡೆಸ್ಕ್:
ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಇಂದು (ಸೆಪ್ಟೆಂಬರ್ 21) ಏಷ್ಯಾಕಪ್ 2025ರ ಸೂಪರ್-4 ಹಂತದ ಪ್ರಮುಖ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುತ್ತಿವೆ. ಗುಂಪು ಹಂತದಲ್ಲಿ ಪಾಕಿಸ್ತಾನವನ್ನು 7 ವಿಕೆಟ್‌ಗಳಿಂದ ಮಣಿಸಿದ ಟೀಮ್ ಇಂಡಿಯಾ, ಸೂಪರ್-4 ಹಂತವನ್ನು ಗೆಲುವಿನಿಂದ ಆರಂಭಿಸುವ ಗುರಿ ಹೊಂದಿದೆ. ಪಾಕಿಸ್ತಾನ ವಿರುದ್ಧದ ಈ ಹೈ-ವೋಲ್ಟೇಜ್ ಪಂದ್ಯವು ರಾತ್ರಿ 8 ಗಂಟೆಗೆ ಆರಂಭವಾಗಲಿದೆ.
ಭಾರತ ಪರ ಶುಭ್‌ಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಇನ್ನಿಂಗ್ಸ್ ಆರಂಭಿಸಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಮೂರನೇ ಕ್ರಮಾಂಕದಲ್ಲಿ ಸಂಜು ಸ್ಯಾಮ್ಸನ್, ನಾಲ್ಕನೇ ಕ್ರಮಾಂಕದಲ್ಲಿ ನಾಯಕ ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ. ತಿಲಕ್ ವರ್ಮಾ ಮಧ್ಯ ಕ್ರಮಾಂಕದಲ್ಲಿ ತಾಳ್ಮೆಯ ಇನ್ನಿಂಗ್ಸ್ ನೀಡಬಹುದಾದ ಆಟಗಾರನಾಗಿ ತೋರುತ್ತಿದ್ದಾರೆ. ಆಲ್‌ರೌಂಡರ್ ವಿಭಾಗದಲ್ಲಿ ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಹಾಗೂ ಅಕ್ಷರ್ ಪಟೇಲ್ ತಂಡಕ್ಕೆ ಬಲ ನೀಡಲಿದ್ದಾರೆ. ಗಾಯಗೊಂಡಿದ್ದ ಅಕ್ಷರ್ ಈಗ ಸಂಪೂರ್ಣ ಫಿಟ್ ಆಗಿದ್ದಾರೆ ಎಂದು ಫೀಲ್ಡಿಂಗ್ ಕೋಚ್ ಟಿ. ದಿಲೀಪ್ ತಿಳಿಸಿದ್ದಾರೆ.
ಬುಮ್ರಾ ಮರಳುವ ನಿರೀಕ್ಷೆ
ಓಮನ್ ವಿರುದ್ಧದ ಪಂದ್ಯದಲ್ಲಿ ಅರ್ಶ್ದೀಪ್ ಸಿಂಗ್ ಮತ್ತು ಹರ್ಷಿತ್ ರಾಣಾಗೆ ಅವಕಾಶ ನೀಡಲಾಗಿತ್ತು. ಆದರೆ ದುಬೈ ಮೈದಾನವು ಸ್ಪಿನ್ನರ್‌ಗಳಿಗೆ ಅನುಕೂಲಕರವಾಗಿರುವುದರಿಂದ ಈ ಬಾರಿ ಆಡುವ XI ಯಲ್ಲಿ ಬದಲಾವಣೆ ಸಾಧ್ಯ. ಜಸ್‌ಪ್ರೀತ್ ಬುಮ್ರಾ ಮತ್ತು ವರುಣ್ ಚಕ್ರವರ್ತಿ ಮರಳುವ ನಿರೀಕ್ಷೆ ಹೆಚ್ಚಾಗಿದೆ. ಇದರಿಂದ ಭಾರತದ ಬೌಲಿಂಗ್ ದಳ ಮತ್ತಷ್ಟು ಬಲಗೊಳ್ಳಲಿದೆ.
ಗುಂಪು ಹಂತದಲ್ಲಿ ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿದ ಭಾರತ, ಮತ್ತೆ ಎದುರಾಗುತ್ತಿರುವ ಈ ಹಂತದಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಲು ಬಯಸುತ್ತದೆ. ಪಾಕಿಸ್ತಾನ ತನ್ನ ಹೋರಾಟದ ಶೈಲಿಯಿಂದಲೇ ಪ್ರಸಿದ್ಧವಾಗಿರುವುದರಿಂದ, ಈ ಪಂದ್ಯ ಅಭಿಮಾನಿಗಳಿಗೆ ಮತ್ತೊಂದು ರೋಚಕ ಅನುಭವ ನೀಡುವುದು ಖಚಿತ.