ಹೊಸದಿಗಂತ ಡಿಜಿಟಲ್ ಡೆಸ್ಕ್:
ಟೆಲ್‌ಅವೀವ್‌ನಲ್ಲಿ ಮತ್ತೆ ಅಶಾಂತಿ ಉಂಟಾಗಿದ್ದು, ಗಾಜಾ ಮೇಲೆ ಇಸ್ರೇಲ್ ನಡೆಸಿದ ತೀವ್ರ ದಾಳಿಯಲ್ಲಿ ಒಂದೇ ದಿನ 91 ಮಂದಿ ಸಾವಿಗೀಡಾಗಿದ್ದಾರೆ. ವಾಯು ಹಾಗೂ ಭೂಸೇನಾ ಕಾರ್ಯಾಚರಣೆಗಳನ್ನು ಹೆಚ್ಚಿಸಿದ ಇಸ್ರೇಲ್ ಪಡೆಗಳು ಗಾಜಾದ ಅತಿದೊಡ್ಡ ನಗರ ಕೇಂದ್ರಗಳನ್ನು ಗುರಿಯಾಗಿಸಿದ್ದು, ಈ ದಾಳಿಯಿಂದ ಪ್ಯಾಲೆಸ್ಟೀನಿಯ ಜನತೆ ಭಾರಿ ಪ್ರಾಣ ಹಾನಿಗೆ ಒಳಗಾಗಿದ್ದಾರೆ. ಅಲ್ ಜಜೀರಾ ವರದಿಯ ಪ್ರಕಾರ, ಮೃತಪಟ್ಟವರಲ್ಲಿ ಪ್ರಮುಖ ವೈದ್ಯರ ಕುಟುಂಬ ಸದಸ್ಯರು ಹಾಗೂ ಉತ್ತರ ಗಾಜಾದ ಹಲವಾರು ನಾಗರಿಕರು ಸೇರಿದ್ದಾರೆ.
ವಸತಿ ಮನೆಗಳು, ಆಶ್ರಯ ಕೇಂದ್ರಗಳು ಹಾಗೂ ಗಾಜಾದಿಂದ ಬೇರೆಡೆಗೆ ತೆರಳುತ್ತಿದ್ದ ಟ್ರಕ್‌ಗಳ ಮೇಲೆಯೂ ದಾಳಿ ನಡೆದಿದೆ. ಈ ದಾಳಿಗಳಲ್ಲಿ ಮಾತ್ರವೇ ಕನಿಷ್ಠ 76 ಮಂದಿ ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಮೂಲಗಳು ತಿಳಿಸಿವೆ. ಗಾಜಾ ನಗರದ ನಾಸ್ರ್ ಪ್ರದೇಶದಲ್ಲಿ ನಡೆದ ಮತ್ತೊಂದು ದಾಳಿಯಲ್ಲಿ ನಾಲ್ವರು ಮೃತರಾಗಿದ್ದಾರೆ. “ನಿರಂತರ ಇಸ್ರೇಲಿ ಬಾಂಬ್ ದಾಳಿ, ಫಿರಂಗಿ ಶೆಲ್ ದಾಳಿ ಮತ್ತು ಕ್ವಾಡ್‌ಕಾಪ್ಟರ್ ದಾಳಿಗಳಿಂದ ಬೇರೆಡೆಗೆ ಸ್ಥಳಾಂತರಗೊಳ್ಳುತ್ತಿದ್ದ ಸಾವಿರಾರು ಜನರು ಬಲಿಯಾಗುತ್ತಿದ್ದಾರೆ” ಎಂದು ಅಲ್ ಜಜೀರಾದ ವರದಿಗಾರ ಹಿಂದ್ ಖೌದರಿ ತಿಳಿಸಿದ್ದಾರೆ.