Sunday, September 21, 2025

ಸ್ವದೇಶಿ ಉತ್ಪನ್ನಗಳ ಬಳಕೆ ಮಾಡಿ: ದೇಶದ ಜನತೆಗೆ ಪ್ರಧಾನಿ ಮೋದಿ ಕರೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶದ ಜನರನ್ನುದ್ದೇಶಿಸಿ ಭಾಷಣ ಮಾಡಿದರು. ಈ ವೇಳೆ ಜತೆಗೆ ನಾಗರಿಕ ದೇವೋಭವ ಮಂತ್ರ ಜಪಿಸಿದ ಅವರು, ಸ್ವದೇಶಿ ಉತ್ಪನ್ನಗಳ ಬಳಕೆಗೆ ಕರೆ ನೀಡಿದರು.

ಕಳೆದ 11 ವರ್ಷಗಳಲ್ಲಿ ದೇಶದ 25 ಕೋಟಿ ಜನರು ಬಡತನದಿಂದ ಮೇಲೆ ಬಂದಿದ್ದಾರೆ. ಹೀಗೆ ಬಡತನದಿಂದ ಹೊರಬಂದು ನವ-ಮಧ್ಯಮ ವರ್ಗ ಎಂದು ಕರೆಯಲ್ಪಡುವ 25 ಕೋಟಿ ಜನರ ಗುಂಪು ದೇಶದ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಈ ವರ್ಗ ತನ್ನದೇ ಕನಸನ್ನು ಹೊಂದಿದೆ. ಜಿಎಸ್‌ಟಿ ಕಡಿತದಿಂದ ನವ ಮಧ್ಯಮ ಮತ್ತು ಮಧ್ಯಮ ವರ್ಗವು 2 ಪಟ್ಟು ಲಾಭ ಗಳಿಸಿದೆ ಎಂದು ಹೇಳಿದರು.

ಸ್ವದೇಶೀ ವಸ್ತುಗಳನ್ನು ಜನರು ಹೆಮ್ಮೆಯಿಂದ ಖರೀದಿಸಬೇಕು ಮತ್ತು ಮಾರಬೇಕು. ಭಾರತದ ಅಭ್ಯುದಯವು ಸ್ವಾವಲಂಬನೆಯ ಮೇಲೆ ಅವಲಂಬಿತವಾಗಿದೆ ಎಂದು ಅಭಿಪ್ರಾಯಪಟ್ಟರು.

ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಗುರಿ ಈಡೇರಬೇಕಾದರೆ ಸ್ವಾವಲಂಬನೆಯ ಪಥದಲ್ಲಿ ನಾವು ಸಾಗಬೇಕು. ನಮ್ಮ ಎಂಎಸ್​ಎಂಇಗಳು ಭಾರತವನ್ನು ಸ್ವಾವಲಂಬನೆಯ ಹಾದಿಯಲ್ಲಿ ಕರೆದೊಯ್ಯುವ ಗುರುತರ ಜವಾಬ್ದಾರಿ ಹೊಂದಿವೆ ಎಂದು ಮೋದಿ ಹೇಳಿದರು.

ಈ ದೇಶದಲ್ಲಿ ನಾವು ಯಾವುದನ್ನು ತಯಾರಿಸಲು ಸಾಧ್ಯವೋ, ಅದನ್ನು ನಾವು ತಯಾರಿಸಬೇಕು. ಈ ದೇಶದ ಜನರಿಗೆ ಇದು ಅಗತ್ಯವಾಗಿದೆ. ಸ್ವಾವಲಂಬನೆಯ ಮಂತ್ರವು ದೇಶದ ಸ್ವಾತಂತ್ರ್ಯವನ್ನು ಹೇಗೆ ಬಲಪಡಿಸಿದೆಯೋ, ಅದೇ ರೀತಿ ಸ್ವಾವಲಂಬನೆಯ ಮಂತ್ರದಿಂದಲೇ ದೇಶದ ಅಭಿವೃದ್ಧಿಗೆ ಪುಷ್ಟಿ ಸಿಗುತ್ತದೆ ಎಂದು ಮೋದಿ ಅಭಿಪ್ರಾಯಪಟ್ಟದರು.

ಇವತ್ತು ಗೊತ್ತಿದ್ದೋ ಗೊತ್ತಿಲ್ಲದೆಯೋ ಹಲವು ವಿದೇಶೀ ಉತ್ಪನ್ನಗಳು ನಮ್ಮ ನಿತ್ಯ ಜೀವನದ ಭಾಗಗಳಾಗಿವೆ. ಜನರು ಸ್ಥಳೀಯ ಉದ್ದಿಮೆಗಳನ್ನು ಬೆಂಬಲಿಸಬೇಕು. ಮೇಡ್ ಇನ್ ಇಂಡಿಯಾ ಉತ್ಪನ್ನಗಳ ಹಿಂದೆ ದೇಶದ ಯುವಜನರ ಶ್ರಮ ಇರುತ್ತದೆ. ಜನರು ಈ ಉತ್ಪನ್ನಗಳನ್ನು ಖರೀದಿಸಬೇಕು. ಪ್ರತಿಯೊಂದು ಮನೆಯೂ ಸ್ವದೇಶೀಯತೆಗೆ ಸಂಕೇತವಾಗಿರಬೇಕು. ಪ್ರತಿಯೊಂದು ಅಂಗಡಿಯೂ ಸ್ವದೇಶೀ ಎಂದು ಗರ್ವದಿಂದ ಹೇಳಬೇಕು ಎಂದು ಮೋದಿ ಹೇಳಿದರು.

ಇದನ್ನೂ ಓದಿ