2025ರ ಶರನ್ನವರಾತ್ರಿ ಹಬ್ಬವು ಸೆಪ್ಟೆಂಬರ್ 22ರ ಸೋಮವಾರದಿಂದ ಆರಂಭವಾಗುತ್ತಿದೆ. ಒಂಬತ್ತು ದಿನಗಳ ಕಾಲ ನಡೆಯುವ ಈ ಹಬ್ಬದಲ್ಲಿ ಪ್ರತಿದಿನ ದುರ್ಗಾ ದೇವಿಯ ಒಂದೊಂದು ರೂಪವನ್ನು ಆರಾಧಿಸುವ ಸಂಪ್ರದಾಯವಿದೆ. ಮೊದಲನೇ ದಿನ ಪರ್ವತ ರಾಜ ಹಿಮಾಲಯನ ಮಗಳು ಶೈಲಪುತ್ರಿ ದೇವಿಯನ್ನು ಪೂಜಿಸಲಾಗುತ್ತದೆ. ನವದುರ್ಗೆಯಲ್ಲಿಯೇ ಮೊದಲನೆಯವರಾದ ಶೈಲಪುತ್ರಿ ಶುದ್ಧತೆ, ಶಕ್ತಿ ಮತ್ತು ಭಕ್ತಿಯ ಸಂಕೇತವೆಂದು ಪರಿಗಣಿಸಲಾಗಿದೆ.
ಶೈಲಪುತ್ರಿ ದೇವಿಯ ಮಹತ್ವ
ಶೈಲಪುತ್ರಿ ದೇವಿ ಸತಿ ಅವತಾರವೆಂದು ಹೇಳಲಾಗುತ್ತದೆ. ಸತಿ ತನ್ನ ದೇಹವನ್ನು ತ್ಯಜಿಸಿದ ಬಳಿಕ, ಹಿಮಾಲಯನ ಮನೆಯಲ್ಲಿ ಜನಿಸಿ ಪಾರ್ವತಿ ಎಂದೂ ಕರೆಯಲ್ಪಟ್ಟಳು. ಬಿಳಿ ನಂದಿಯ ಮೇಲೆ ಸವಾರಿ ಮಾಡುವ ಅವಳು, ಬಲಗೈಯಲ್ಲಿ ತ್ರಿಶೂಲ ಮತ್ತು ಎಡಗೈಯಲ್ಲಿ ಕಮಲ ಹಿಡಿದಿರುವ ರೂಪದಲ್ಲಿ ಕಾಣಿಸಿಕೊಂಡಿದ್ದಾಳೆ. ಅವಳ ಆರಾಧನೆ ಭಕ್ತರಿಗೆ ಆತ್ಮಶುದ್ಧಿ, ತಾಳ್ಮೆ ಮತ್ತು ದೈವಿಕ ಶಕ್ತಿ ನೀಡುತ್ತದೆ ಎನ್ನಲಾಗುತ್ತದೆ.
ಈ ವರ್ಷದ ಕಲಶ ಸ್ಥಾಪನೆ ಮತ್ತು ಶೈಲಪುತ್ರಿ ಪೂಜೆಯ ಶುಭ ಸಮಯ ಬೆಳಗ್ಗೆ 6:09 ರಿಂದ 8:06ರ ತನಕವಾಗಿದೆ. ಮಧ್ಯಾಹ್ನದ ವಿಶೇಷ ಸಮಯ ಬೆಳಗ್ಗೆ 11:49 ರಿಂದ 12:38ರವರೆಗೂ ಶುಭವೆಂದು ಹೇಳಲಾಗಿದೆ. ಈ ಸಮಯದಲ್ಲಿ ಆರಾಧನೆ ಮಾಡಿದರೆ ಭಕ್ತರಿಗೆ ವಿಶೇಷ ಫಲ ದೊರೆಯುತ್ತದೆ ಎಂದು ನಂಬಲಾಗಿದೆ.
ಪೂಜೆ ವಿಧಾನ
ಶೈಲಪುತ್ರಿ ದೇವಿಯ ಪೂಜೆಗೆ ಮುನ್ನ ಸ್ವಚ್ಛತೆಯೊಂದಿಗೆ ಸ್ನಾನ ಮಾಡಿ, ಕಲಶ ಸ್ಥಾಪನೆ ಮಾಡಬೇಕು. ದೇವಿಯ ವಿಗ್ರಹ ಅಥವಾ ಚಿತ್ರವನ್ನು ಪೂಜಾ ಸ್ಥಳದಲ್ಲಿ ಇರಿಸಿ, ಅರಿಶಿನ, ಕುಂಕುಮ, ಅಕ್ಕಿ, ಬಿಳಿ ಅಥವಾ ಕೆಂಪು ಹೂವುಗಳು ಹಾಗೂ ಧೂಪದೀಪಗಳನ್ನು ಅರ್ಪಿಸಬೇಕು.
ಶಾಸ್ತ್ರಗಳಲ್ಲಿ ಶೈಲಪುತ್ರಿ ದೇವಿಗೆ ಶುದ್ಧ ಹಸುವಿನ ತುಪ್ಪ ಅಥವಾ ಅದರಿಂದ ತಯಾರಿಸಿದ ಸಿಹಿತಿಂಡಿಗಳನ್ನು ಅರ್ಪಿಸುವುದು ಅತ್ಯಂತ ಪವಿತ್ರವೆಂದು ಹೇಳಲಾಗಿದೆ. ತುಪ್ಪವನ್ನು ಅರ್ಪಿಸುವುದರಿಂದ ಆರೋಗ್ಯ, ಸಮೃದ್ಧಿ ಮತ್ತು ದೀರ್ಘಾಯುಷ್ಯ ದೊರೆಯುತ್ತದೆ ಎನ್ನುವ ನಂಬಿಕೆಯಿದೆ.